ಡಿ.3,4: ಮಂಚಿ-ಕೊಳ್ನಾಡು ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿಗೆ ಶಿಲಾನ್ಯಾಸ ಸಮಾರಂಭ
ಬಂಟ್ವಾಳ, ನ. 29:ತಾಲೂಕಿನ ಮಂಚಿ-ಕೊಳ್ನಾಡು ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಗೋಪಾಲಕೃಷ್ಣ ಗರ್ಭಗುಡಿಗೆ ಶಿಲಾನ್ಯಾಸ ಸಮಾರಂಭ ಹಾಗೂ ದೈವಗಳ ಪ್ರತಿಷ್ಠೆ, ನೇಮೋತ್ಸವ ಡಿ.3,4ರಂದು ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಕುಡೆ ರಾಮಣ್ಣ ಆಚಾರ್ ಅವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಡಿ.4ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೋಪಾಲಕೃಷ್ಣ ದೇವರ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಲಿದೆ ಎಂದರು.
ಇದೇ ವೇಳೆ ಕೊಡಮಣಿತ್ತಾಯಿ, ರಕ್ತೇಶ್ವರೀ, ಗುಳಿಗಾ, ಕೊರತಿ ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಾಶಾಭಿಷೇಕ, ತಂಬಿಲ ಸೇವೆ ನಡೆಯಲಿದ್ದು, ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠದ ಮಠಾಧೀಶರಾದ ಕೇಶವಾನಂದ ಭಾರತಿ ಮಹಾಸ್ವಾಮಿ ಅವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ರಾತ್ರಿ ದೇವರಿಗೆ ರಂಗಪೂಜೆಯ ಬಳಿಕ ದೈವಗಳ ನೇಮೋತ್ಸವ ನಡೆಯಲಿದೆ ಎಂದು ವಿವರಿಸಿದರು.
ದೇವಳದ ಸುತ್ತುಗೋಪುರ, ಪ್ರಧಾನ ಗರ್ಭಗುಡಿ, ಐದು ಉಪಗುಡಿ, ತೀರ್ಥ ಬಾವಿ, ತೀರ್ಥ ಮಂಟಪ, ಪುಷ್ಕರಿಣಿ, ಸಭಾಭವನ, ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸುಮಾರು 3.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಶೇ.50ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಂದಿನ ಎಪ್ರಿಲ್‍ನಲ್ಲಿ ಬ್ರಹ್ಮಕಲಶೋತ್ಸವನ್ನು ಆಚರಿಸಲು ಸಮಿತಿ ಸಂಕಲ್ಪಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸಮಿತಿ ಕಾರ್ಯಾಧ್ಯಕ್ಷ ಸುಭಾಸ್ ಚಂದ್ರ ಶೆಟ್ಟಿ ಕುಳಾಲ್ ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ವಿಜಯ ಶೆಟ್ಟಿ ಸಾಲೆತ್ತೂರು, ವಿಶ್ವನಾಥ ಬಂಗೇರಾ, ರಾಮಕೃಷ್ಣ ನಾಯಕ್ ಮತ್ತಿತರರು ಇದ್ದರು.