ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನೆ
ಬೆಳ್ತಂಗಡಿ,ನ.29: ಬೋಳೋಡಿ ವೆಂಕಟ್ರಮಣ ಭಟ್ ಸ್ಮರಣಾರ್ಥ ಅವರ ಅಭಿಮಾನಿಗಳು ಮತ್ತು ಮನೆಯವರು ಪಟ್ರಮೆ ಗ್ರಾಮದ ಶಾಂತಿಕಾಯ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಮತ್ತು ಈ ತಂಗುದಾಣವನ್ನು ಗ್ರಾಮಪಂಚಾಯತಿಗೆ ಹಸ್ತಾಂತರ ಗೊಳಿಸುವ ಕಾರ್ಯಕ್ರಮವು ನ.28 ರಂದು ಪಟ್ರಮೆಯ ಶಾಂತಿಕಾಯ ಚಾಕೊಟೆತ್ತಡಿ ಎಂಬಲ್ಲಿ ನಡೆಯಿತು.
ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಇವರು ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ದಿ. ಬೋಳೋಡಿ ಭಟ್ಟರ ಮಹತ್ತರ ಪ್ರಯತ್ನದಿಂದಾಗಿ ಪಟ್ರಮೆ ಗ್ರಾಮಕ್ಕೆ ಸರಕಾರಿ ವ್ಯವಸ್ಥೆಯ ಹೆಚ್ಚಿನ ಎಲ್ಲಾ ಸವಲತ್ತುಗಳು ಬರುವಂತಾಗಿದೆ. ಇಂದು ಅದೇ ಬೋಳೋಡಿ ಭಟ್ಟರ ಸ್ಮರಣಾರ್ಥ ಅವರ ಅಭಿಮಾನಿಗಳು ಮತ್ತು ಮನೆಯವರು ಸೇರಿ ಇಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸುಂದರವಾದ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ಇದನ್ನು ಸಂತೋಷದಿಂದ ಭಟ್ಟರ ನೆನಪಿಗಾಗಿ ಲೋಕಾರ್ಪಣೆಗೊಳಿಸುತ್ತಿದ್ದೇನೆ ಎಂದರು.
ನ್ಯಾಯವಾದಿ, ಬೋಳೋಡಿ ಮನೆ ಬಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಿಯ ರೈತ ಕಾರ್ಮಿಕ ಮುಖಂಡ ಕೆ. ಆರ್. ಶ್ರೀಯಾನ್, ಬೋಳೋಡಿ ಭಟ್ಟರ ಧರ್ಮಪತ್ನಿ ಬಿ.ವಿ. ಭವಾನಿ , ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ , ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ, ಪಟ್ರಮೆ ಗ್ರಾ.ಪಂ. ಸದಸ್ಯ ಶ್ಯಾಮರಾಜ್ ಬೋಳೋಡಿ , ಉಪಾಧ್ಯಕ್ಷೆ ಬಾಬಿ , ಗ್ರಾ.ಪಂ. ಸದಸ್ಯರುಗಳಾದ ಶೀಲಾವತಿ, ಮಾಲತಿ, ಬಾಲಕೃಷ್ಣ ಗೌಡ ,ಕೆಇಬಿ ಕಿರಿಯ ಅಭಿಯಂತರ ಪುಟ್ಟರಾಜು, ಉಪಸ್ಥಿತರಿದ್ದರು.
ಬೋಳೋಡಿ ಭಟ್ಟರ ಅಭಿಮಾನಿಗಳು ಮತ್ತು ಮನೆಯವರು ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಪಟ್ರಮೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಶಾಸಕರು ಹಸ್ತಾಂತರಿಸಿದರು.
ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಸಹಕರಿಸಿದ ಜಯಂತ ಗೌಡ , ಬೊಮ್ಮ ಗೌಡ , ಡೊಂಬಯ ಗೌಡ, ಮಹಮ್ಮದ್ ಶರೀಫ್ , ಹಾರೀಸ್ ಪಟ್ರಮೆ, ನೋಣಯ್ಯ ಎಂ.ಕೆ., ಸುಂದರ ಎಂ.ಕೆ., ಕೃಷ್ಣಪ್ಪ ಕಲ್ಲಾಜೆ, ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭ ಪಟ್ರಮೆ ಗ್ರಾಮದ ಕೊಕ್ಕಡ -ಪಟ್ರಮೆ ಮತ್ತು ನಿಡ್ಲೆ -ಪಟ್ರಮೆ ರಸ್ತೆಗಳನ್ನು ಡಾಮರೀಕರಣಗೊಳಿಸಲು ಗ್ರಾಮಸ್ಥರ ಪರವಾಗಿ ಶಾಸಕರಿಗೆ ಮನವಿಯನ್ನು ನೀಡಿದರು.
ಬೆಳ್ತಂಗಡಿ ತಾಲೂಕು ಡಿವೈಎಫ್ ಐ ಅಧ್ಯಕ್ಷ ಧನಂಜಯ ಗೌಡ ಪಟ್ರಮೆ ಸ್ವಾಗತಿಸಿ , ಪುಷ್ಪಾ ಶ್ರೀನಿವಾಸ್ ವಂದಿಸಿದರು.