ಮಣಿಪಾಲ : ವಿಕಲಚೇತನರ ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ
ಮಣಿಪಾಲ, ನ.29: ವಿಕಲಚೇತನರ ಮಾನಸಿಕ ಪೋಷಣಾ ಭತ್ಯೆಯನ್ನು ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಕಲಚೇತನರು ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಸರಕಾರಿ ಕಚೇರಿಗಳಲ್ಲಿ ವಿಕಲಚೇತನರ ಕೆಲಸವನ್ನು ವಿಳಂಬ ಮಾಡಬಾರದು. ಎಲ್ಲಾ ಕಚೇರಿಗಳಲ್ಲೂ ನೆಲ ಅಂತಸ್ಥಿನಲ್ಲಿಯೇ ಕಾರ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ಬಸ್‌ಗಳಲ್ಲಿ ಶೇ.50 ರಿಯಾಯಿತಿ ನೀಡಬೇಕು. ಸ್ಥಳೀಯ ಶಾಸಕರ ನಿಧಿಯನ್ನು ವಿಕಲಚೇತನರಿಗೆ ಕಡ್ಡಾಯವಾಗಿ ಮೀಸಲಿಟ್ಟು ಆಯಾ ವರ್ಷದಲ್ಲಿಯೇ ಅದನ್ನು ಖರ್ಚು ಮಾಡ್ಳಬೇಕು. ಬ್ಲಾಕ್‌ಲಾಗ್ ಹುದ್ದೆಗಳನ್ನು ವಯಸ್ಸು ಸಡಿಲಿಕೆ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಎಂಡೋಸಲ್ಪಾನ್ ಪೀಡಿತರ ಪುನರ್ವಸತಿ ಕೇಂದ್ರವನ್ನು ನಿರ್ಮಿಸಲು ಕುಂದಾಪುರ ತಾಲೂಕಿನ ನಾಡದಲ್ಲಿ ಐದು ಎಕರೆ ಜಾಗ ಮಂಜೂರಾಗಿದ್ದು, ಸರಕಾರದಿಂದ ಹಣ ಬಿಡುಗಡೆಯಾದ ತಕ್ಷಣವೇ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಎಂಡೋಸಲ್ಪಾನ್ ಪೀಡಿತರಿಂದ ಬಸ್ ಪಾಸ್‌ಗಾಗಿ 409 ಅರ್ಜಿಗಳು ಸಲ್ಲಿಕೆಯಾಗಿದ್ದು, 42 ಅರ್ಜಿಗಳನ್ನು ತಾಂತ್ರಿಕ ಕಾರಣಕ್ಕೆ ತಿರಸ್ಕೃತಗೊಳಿಸಲಾಗಿದೆ. ಇವುಗಳನ್ನು ಪುನರ್ ಪರಿಶೀಲಿಸಿ ಶೀಘ್ರವೇ ಬಸ್ ಪಾಸ್ ನೀಡುವ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ವಿಕಲಚೇತನರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಒಕ್ಕೂಟ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಕಾರ್ಕಳ ಮಂಜುಳಾ, ಕೃಷ್ಣ ಬ್ರಹ್ಮಾವರ, ರಾಧಾಕೃಷ್ಣ ಬೈಂದೂರು, ಬಾಬು ದೇವಾಡಿಗ ಉಪ್ಪುಂದಮೊದಲಾದವರು ಉಪಸ್ಥಿತರಿದ್ದರು.