ಧರ್ಮಸಂಸದ್ ಬೆಂಬಲಿಸದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು : ಆರೋಪ
ಉಡುಪಿ, ನ.29: ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಹಾಗೂ ಹಿಂದೂ ಸಮಾಜೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರಾಜಕೀಯ ಹಿನ್ನೆಲೆಯಲ್ಲಿ ನೋಡಬಾರದಿತ್ತು. ಅವರೇ ಮುಂದೆ ನಿಂತು ಜವಾಬ್ದಾರಿ ನಿರ್ವಹಿಸಬೇಕಾಗಿತ್ತು. ಅನ್ಯಧರ್ಮೀಯರ ಕಾರ್ಯಕ್ರಮಗಳಿಗೆ ಶುಭಾಶಯ ಕೋರುವ ಸಚಿವರು ಈ ಸಮಾವೇಶಕ್ಕೆ ಬೆಂಬಲ ನೀಡುವ ಕೆಲಸವನ್ನೂ ಕೂಡ ಮಾಡಿಲ್ಲ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಸಂಸದ್ ಹಾಗೂ ಹಿಂದೂ ಸಮಾಜೋತ್ಸವದ ಯಶಸ್ಸಿನಿಂದ ಘಾಸಿಗೊಂಡಿರುವ ಕೆಲವು ವಿಘ್ನ ಸಂತೋಷಿಗಳು ಪೇಜಾವರ ಸ್ವಾಮೀಜಿಗಳ ಭಾವಚಿತ್ರ ಇರುವ ಪೋಸ್ಟರನ್ನು ಕಾಲಿನಿಂದ ತುಳಿದು ಅಪಮಾನ ಮಾಡಿದ್ದು, ಆ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಆಗ್ರಹಿಸಿದರು.
ಸಾಹಿತಿ ಚಂಪಾ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಓಲೈಕೆ ಮಾಡುವ ಭರದಲ್ಲಿ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯ ನಡೆಸಿದ್ದಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ರಕ್ಷಿಸಬೇಕಾದ ಸಾಹಿತಿಗಳೇ ಬೇಜವಾಬ್ದಾರಿಯಾಗಿ ವರ್ತಿಸುವುದು ಕನ್ನಡ ನಾಡಿಗೆ ಮಾಡುವ ಅಪಮಾನ. ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯ ವಿಷ ಬೀಜ ಬಿತ್ತುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಸಲೀಂ ಅಂಬಾಗಿಲು, ವಿಜಯ ಭಟ್, ರಿಕೇಶ್ ಪಾಲನ್ ಉಪಸ್ಥಿತರಿದ್ದರು.