×
Ad

ಕಾರ್ಕಳ ಪುರಸಭೆ : ಸಾಮಾನ್ಯ ಸಭೆ

Update: 2017-11-29 21:34 IST

ಕಾರ್ಕಳ,ನ.29: ಪುರಸಭೆಗೆ ಏನು ಕೊಟ್ಟಿಲ್ಲ ಎಂದು ಸಂಸದರನ್ನು ಮರೆತಿರಾ? ಅಥವಾ ಪ್ರಯೋಜನ ಇಲ್ಲ ಎಂಬ ಕಾರಣಕ್ಕೆ ಪ್ರೊಟೋಕಾಲ್ ಉಲ್ಲಂಘಿಸಿದ್ದೀರಾ ಎಂದು ಪ್ರತಿಪಕ್ಷದ ಸದಸ್ಯ ಶುಭದ ರಾವ್ ಆಡಳಿತ ಪಕ್ಷವನ್ನು ಪ್ರಶ್ನಿಸಿದ್ದಾರೆ. 

ಅವರು ಬುಧವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಅಭಿವೃದ್ದಿ ಕಾಮಗಾರಿಗೆ ಸಂಬಂಸಿದಂತೆ ಅಳವಡಿಸಲಾದ ನಾಮಫಲಕಗಳಲ್ಲಿ ಸಂಸದೆ ಶೋಭ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಕಡೆಗಣಿಸಲಾಗಿದ್ದು. ಸಂಸದರ ಒಂದು ಓಟಿನಿಂದ  ಪರೋಕ್ಷವಾಗಿ ಅಕಾರ ಹಿಡಿದು ಆಡಳಿತ ನಡೆಸುತ್ತಿರುವ ಬಿಜೆಪಿ, ಈಗ ಅವರನ್ನೇ ಮರೆತಿರುವುದು ವಿಪರ್ಯಸವಾಗಿದೆ ಎಂದು ವ್ಯಂಗ್ಯವಾಡಿದರು. 

ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ವೇಳೆ ಸ್ಥಳೀಯ ಜನಪ್ರತಿನಿಗಳನ್ನು ಆಹ್ವಾನಿಸದೆ ಶಿಷ್ಠಾಚಾರ ಉಲಂಘನೆ ನಡೆಯುತ್ತಿದೆ. ಸದಸ್ಯರು ವಾರ್ಡ್‍ನ ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸಿ, ಫಲ ಸಿಗುವ ವೇಳೆ ಆಡಳಿತ ಪಕ್ಷದಿಂದ ಇಂತಹ ಕೆಟ್ಟ ರಾಜಕಾರಣ ಮಾಡುವುದು ಎಷ್ಟು ಸರಿ ಎಂದರು. 

ಅಭಿವೃದ್ಧಿ ಕಾಮಗಾರಿಗಳಿಗೆ ಆಹ್ವಾನಿಸುತ್ತಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. 

ಸುಭಿತ್ ಎನ್.ಆರ್ ಮಾತನಾಡಿ, ವಾಟ್ಸ್ ಆ್ಯಪ್ , ಪೇಸ್‍ಬುಕ್‍ಗಳಲ್ಲಿ ಸಂಸದೆ ಶೋಭ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದೀಗ ಆಡಳಿತ ಪಕ್ಷದವರು ಮರೆತೇ ಬಿಟ್ಟಿರುವುದು ಕಂಡುಬರುತ್ತಿದೆ. 

ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್ ಮಾತನಾಡಿ, ಅಭಿವೃದ್ದಿಯಲ್ಲೂ ರಾಜಕೀಯ ಮಾಡಬೇಡಿ. ನಮ್ಮ ವಾರ್ಡ್ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ. ಕೆಲಸವಾಗದಿದ್ದರೆ ಮತದಾರರಿಂದ ಉಗಿಸಿಕೊಳ್ಳವುದು ನಾವೇ. ಅದ್ದರಿಂದ ಕಾಮಗಾರಿ ನಡೆಸಿ ಮತದಾರರ ಪ್ರಶಂಸೆ ನಮಗೆ ಸಿಗಲಿ ಎಂದರು. 

ಇದೇ ವೇಳೆ ಶಾಂತಿ ಶೆಟ್ಟಿ ಮಾತನಾಡಿ, ನನ್ನ ವಾರ್ಡ್‍ನಲ್ಲಿ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಸಂದರ್ಭ ಮಾಹಿತಿ ನೀಡದೇ ಅಧ್ಯಕ್ಷರೇ ಬಂದು ನಮ್ಮ ಸಾಧನೆ ಎಂದು ಹೇಳಿ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. 

ಪುರಸಭೆ ವ್ಯಾಪ್ತಿಯ ನಾಗರಿಕರಿಗೆ ನೀರು ಸರಬರಾಜು ಮಾಡುವ ಪೈಪ್‍ಲೈನ್‍ಗಳು ಒಡೆದು ಹೋಗಿವೆ. ತಿಂಗಳಾದರೂ ದುರಸ್ತಿಯಾಗಿಲ್ಲ. ಯಾಕೆ ಇಷ್ಟು ವಿಳಂಬವಾಗುತ್ತಿದೆ. ಕೂಡಲೇ ದುರಸ್ತಿಪಡಿಸುವಂತೆ ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. 

ಈ ಸಂದರ್ಭ ಮೊಹಮ್ಮದ್ ಶರೀಫ್ ಅವರು ಅಧ್ಯಕ್ಷೆ ಹಾಗೂ ಮುಖ್ಯಾಕಾರಿಗೆ ಖಾಲಿ ಬಕೆಟ್ ನೀಡಿನೀರು ಕೊಡಿ ಎಂದು ಪ್ರತಿಭಟನೆ ನಡೆಸಿ, ಕಳೆದ ಹಲವು ದಿನಗಳಿಂದ ಕಲುಷಿತ ನೀರು ಸರಬರಾಜಾಗುತ್ತಿದ್ದು, ಇದೇ ಕಾರಣಕ್ಕಾಗಿ ಪುರಸಭೆ ಮುಂಭಾಗ ಕಲುಷಿತ ನೀರನ್ನು ತಂದು ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಇಂದಿಗೂ ಅದೇ ನೀರು ಪೂರೈಕೆಯಾಗುತ್ತಿದ್ದು, ಸ್ಥಳಿಯ ಹೊಟೇಲ್ ಹಾಗೂ ಇನ್ನಿತರ ಕಡೆಗಳಲ್ಲಿ ಬಳಸಲಾಗುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದರು. 

ಉಪಾಧ್ಯಕ್ಷ ಗಿರಿಧರ್ ನಾಯಕ್ ಮಾತನಾಡಿ, ಹೊಟೇಲ್‍ಗಳಲ್ಲಿ ನೀರು ಶುದ್ಧೀಕರಣ ಘಟಕ ಇದೆ ಎಂದು ಸಮಜಾಯಿಸಿ ನೀಡಿ, ನೀರಿನ ಪೈಪುಗಳು ಒಡೆದು, ದುರಸ್ತಿಯಾಗದ ಹಿನ್ನೆಲೆಯಲ್ಲಿ ಈ ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಸರಿಯಾಗಲಿದೆ ಎಂದರು.

ಸದಸ್ಯ ಯೋಗೀಶ್ ದೇವಾಡಿಗ ಮಾತನಾಡಿ, ಅಕಾರಿ ವರ್ಗಕ್ಕೆ ಈ ಸಮಸ್ಯೆಯ ಬಗ್ಗೆ ಹಲವು ಬಾರಿ ತಿಳಿಸಿದ್ದೇವೆ ಎಂದರು. 
ಪುರಸಭೆ ಇಂಜಿನಿಯರ್ ಪದ್ಮನಾಭ ಮಾತನಾಡಿ, 60 ಮೀ.ಉದ್ದದ ಪೈಪ್‍ಲೈನ್ ದುರಸ್ತಿಯಾಗುತ್ತಿದೆ. ಆದರೆ ತೆಳ್ಳಾರು ಭಾಗದ ಒಂದು ಕಡೆ ನೀರು ಸೋರಿಕೆ ಸರಿಪಡಿಸಲು ಸ್ಥಳೀಯ ಗುತ್ತಿಗೆದಾರರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಗಳೂರಿನ ಗುತ್ತಿಗೆದಾರರಿಂದ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ ಪರಿಣಾಮ ವಿಳಂವಾಗಿದೆ. ಈ ಪೈಪುಗಳು ಸುಮಾರು 35 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಅದರ ಕೆಲವು ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಸಮಸ್ಯೆಗೆ ಕಾರಣವಾಗಿದೆ ಎಂದರು. 

ರೆಹಮತ್ ಎನ್.ಶೇಖ್ ಮಾತನಾಡಿ, ಕಾಬೆಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ ಇದ್ದು ಪುರಸಭೆ ವತಿಯಿಂದ ಬಾವಿಯೊಂದನ್ನು ನಿರ್ಮಿಸಲಾಗಿದೆ. ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದಲ್ಲಿ ಆ ಮೂಲಕ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದರು. 

ಅನಗತ್ಯ ಚರ್ಚೆ ಕಲಾಪದ ಸಮಯ ವ್ಯರ್ಥ
ಅಭಿವೃದ್ಧಿ ಬಗ್ಗೆ ಯಾವುದೇ ಚರ್ಚೆಗಳು ನಡೆಯದೆ ಬರೀ ಅನಗತ್ಯ ವಿಚಾರದಲ್ಲಿ ಸದನದ ಸಮಯವನ್ನು ಸದಸ್ಯರು ಹಾಳು ಮಾಡಿದ್ದರು. ಒಂದು ಕಡೆಯಲ್ಲಿ ಅಸಭ್ಯ ವರ್ತನೆ, ಮತ್ತೊಂದು ಕಡೆಯಲ್ಲಿ ಎಲ್ಲೂ ಕಂಡರೂ ಗದ್ದಲ ಎದ್ದು  ಕಾಣುತ್ತಿತ್ತು. ಪ್ರತಿಪಕ್ಷದ ಸದಸ್ಯರು ಆಸನ ಬಿಟ್ಟು ಅಧ್ಯಕ್ಷರ ಮುಂದೆ ಜಮಾಯಿಸಿದ್ದರೆ, ಆಡಳಿತ ಪಕ್ಷದ ಸದಸ್ಯರು ಅವರಷ್ಟಕ್ಕೆ ಕುಳಿತು ಮಾತನಾಡುತ್ತಿದ್ದರು. ಅಕಾರಿಗಳು ನಮಗಲ್ಲ ಅನ್ನುವ ರೀತಿಯಲ್ಲಿ ಕಾರ್ಯ ಮಗ್ನರಾಗಿದ್ದರು. ಸಭೆಯ ಅಜೆಂಡಾದ ವಿಷಯ ಪ್ರಸ್ತಾಪವಾಗದೆ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಚರ್ಚೆಗಳೇ ಮುಂದುವರೆದಿತ್ತು.

ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಸದಸ್ಯ ಅಕ್ಷಯ್ ರಾವ್, ಮುಖ್ಯಾಕಾರಿ ಮೇಬಲ್ ಡಿಸೋಜಾ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News