ಸಫ್ವಾನ್ ಅವಶೇಷ ಪತ್ತೆ: ಕಾಟಿಪಳ್ಳದಲ್ಲಿ ಜನತೆಗೆ ಆಘಾತ
ಮಂಗಳೂರು, ನ. 29: ತಂಡವೊಂದರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿರುವ ಕಾಟಿಪಳ್ಳದ ನಿವಾಸಿ ಸಫ್ವಾನ್‌ರ ಮೃತದೇಹದ ಅವಶೇಷ ಪತ್ತೆಯಾಗಿರುವುದು ಕಾಟಿಪಳ್ಳದ ಜನತೆಗೆ ಆಘಾತ ನೀಡಿದೆ. ಅಪಹರಣಕ್ಕೊಳಗಾದಂದಿನಿಂದ ಸಫ್ವಾನ್ ಜೀವಂತವಾಗಿ ಮರಳುತ್ತಾನೆಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕುಟುಂಬ ಸದಸ್ಯರು ಸಹಿತ ಸ್ಥಳೀಯರಿಗೆ ಈ ಘಟನೆಯು ದಿಗ್ಭ್ರಾಂತಗೊಳಿಸಿದೆ.
ಬುಧವಾರ ಸುಮಾರು 15 ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಭೆ ಸೇರಿ ಅಮಾಯಕನಾಗಿರುವ ಸಫ್ವಾನ್‌ನ ಹತ್ಯೆಯನ್ನು ಖಂಡಿಸಿದರು. ಕೃಷ್ಣಾಪುರ 7ನೆ ಬ್ಲಾಕ್‌ನಲ್ಲಿರುವ ನ್ಯೂ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯಲ್ಲಿ ಸಭೆ ಸೇರಿದ ಸ್ಥಳೀಯರು ಘಟನೆಯನ್ನು ಖಂಡಿಸಿದ್ದಾರಲ್ಲದೆ, ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಡ್ರಗ್ಸ್, ಗಾಂಜಾ ಮತ್ತಿತರ ಮಾದಕ ಜಾಲಗಳನ್ನು ಬೇಧಿಸಿ ಅದಕ್ಕೆ ಕಡಿವಾಣ ಹಾಕಬೇಕು. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಸಂಘ, ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಡಿ.1ರಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಿದ್ದು, ಹೋರಾಟದ ಮುಂದಿನ ರೂಪುರೇಷೆಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಊರಿನಿಂದ ಗಡೀಪಾರು ಮಾಡಬೇಕು: ನಾಗರಿಕ ಸಮಿತಿ
ಸಫ್ವಾನ್ ಅಪಹರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಸಫ್ವಾನ್ ಸಹಿತ ಇತರರನ್ನು ಊರಿನಿಂದಲೇ ಗಡೀಪಾರು ಮಾಡಬೇಕು ಎಂದು ಕೃಷ್ಣಾಪುರ ನಾಗರಿಕ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಒತ್ತಾಯಿಸಿದ್ದಾರೆ. ಅಮಾಯಕನೋರ್ವನನ್ನು ಅಪಹರಿಸಿ ಹತ್ಯೆ ಮಾಡಿರುವ ಅಪಹರಣಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.