‘ಮಾಧವ, ಮಧ್ವ, ಮಾನವ ಸೇವೆಯಲ್ಲಿ ಸಾರ್ಥಕ್ಯತೆ’

Update: 2017-11-29 17:18 GMT

ಉಡುಪಿ, ನ.29: ನನ್ನ 80 ವರ್ಷಗಳ ಸನ್ಯಾಸ ಜೀವನದಲ್ಲಿ ಮಾಧವ, ಮಧ್ವ ಹಾಗೂ ಮಾನವ ಸೇವೆಯಲ್ಲಿ ಸಾರ್ಥಕ್ಯವನ್ನು ಕಂಡಿದ್ದೇನೆ. ಇವುಗಳನ್ನು ಯಥಾಶಕ್ತಿಯಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಜನರಲ್ಲಿ ಭಗವಂತನನ್ನು ಕಂಡಿದ್ದೇನೆ’ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಾಖಲೆಯ ಐದನೇ ಪರ್ಯಾಯವನ್ನು ನಡೆಸುತ್ತಿರುವ ಶ್ರೀವಿಶ್ವೇಶತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ 80ನೇ ವರ್ಧಂತಿ ಪ್ರಯುಕ್ತ ಬುಧವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡುತಿದ್ದರು.

ಪ್ರತಿಯೊಬ್ಬ ಮಾನವವೂ ತಾನು ಮಾಡಬೇಕಾದ ಕರ್ತವ್ಯವನ್ನು ಪ್ರಾಮಾಣಿಕತೆ, ನಿಷ್ಠೆ ಹಾಗೂ ನಿಸ್ವಾರ್ಥದಿಂದ ಮಾಡುವುದು ನಿಜವಾದ ಧರ್ಮ. ನಾನು ಯತಿಗಳ ಕರ್ತವ್ಯವನ್ನು ನಮ್ಮ ಶಕ್ತಾನುಸಾರ ಪ್ರಾಮಾಣಿಕವಾಗಿ ಮಾಡಿದ್ದೇನೆ. ನಾವು ಜಾತಿ-ಕುಲದ ಭೇದವನ್ನು ತೋರದೇ ಧರ್ಮ, ಜ್ಞಾನ ಹಾಗೂ ತತ್ವದ ಪ್ರಸಾರವನ್ನು ಯಥಾಶಕ್ತನಾಗಿ ಮಾಡಿದ್ದೇನೆ ಎಂದರು.

ಪರಮಾತ್ಮನಲ್ಲಿ ಭಕ್ತಿ, ಪಾಠಪ್ರವಚನ, ಧಾರ್ಮಿಕ ಜಾಗೃತಿ ಹಾಗೂ ತತ್ವಜ್ಞಾನದ ಪ್ರಸಾರ ಇವು ಯತಿಗಳ ಕರ್ತವ್ಯವಾಗಿದ್ದು, ಇವುಗಳನ್ನು ನನ್ನ ಪರಿಮಿತಿಯೊಳಗೆ ಮಾಡಿದ್ದೇನೆ. ಇವುಗಳೊಂದಿಗೆ ಮಧ್ವರು ಹೇಳಿದಂತೆ ಸಮಾಜ ಸೇವಾ ಕಾರ್ಯದಲ್ಲೂ ಪ್ರಾಮಾಣಿಕನಾಗಿ ತೊಡಗಿಸಿಕೊಂಡಿದ್ದೇನೆ.ಇದನ್ನು ಭಗವಂತನಿಗೆ ನೀಡಬೇಕಾದ ತೆರಿಗೆ ಎಂದೇ ನಾನು ಭಾವಿಸಿದ್ದೇನೆ ಎಂದು ಪೇಜಾವರ ಶ್ರೀಗಳು ನುಡಿದರು.

ಮುಂದಿನ ಪರ್ಯಾಯ ನೋಡಬೇಕು: ದಾಖಲೆಯ ಐದನೇ ಪರ್ಯಾಯದ ಬಳಿಕ ನಿಮ್ಮೆಲ್ಲರ ಹಾರೈಕೆಯಂತೆ ನಾವು ಬದುಕಿದ್ದರೆ, 6ನೇ ಪರ್ಯಾಯವನ್ನು ನಾನು ಮಾಡುವುದಿಲ್ಲ, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಮಾಡುವುದನ್ನು ನೋಡಲು ಬಯಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದರು.

ದಾಖಲೆಯ ಐದನೇ ಪರ್ಯಾಯದ ಬಳಿಕ ನಿಮ್ಮೆಲ್ಲರ ಹಾರೈಕೆಯಂತೆ ನಾವು ಬದುಕಿದ್ದರೆ, 6ನೇ ಪರ್ಯಾಯವನ್ನು ನಾನು ಮಾಡುವುದಿಲ್ಲ, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಮಾಡುವುದನ್ನು ನೋಡಲು ಬಯಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದರು. ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಪಿ.ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಪಾಲ್ಗೊಂಡು ಶುಭ ಹಾರೈಸಿದರು.ಪ್ರೊ.ಎ.ಹರಿದಾಸ ಭಟ್ ವಿಶೇಷ ಉಪನ್ಯಾಸ ನೀಡಿದರು. ಪಿ.ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇದಕ್ಕೆ ಮುನ್ನ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ 80ನೇ ವರ್ಧಂತಿ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವತಿಯಿಂದ ಭಕ್ತಾದಿಗಳು ಹಾಗೂ ಅಭಿಮಾನಿಗಳಿಂದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ನಾಣ್ಯಗಳಿಂದ ತುಲಾಭಾರ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಕರ್ನಾಟಕ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಸಚಿವ ಅಮರನಾಥ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಪೇಜಾವರ ಶ್ರೀಗಳ ಸನ್ಯಾಸ ಸ್ವೀಕಾರದ 80ನೇ ವರ್ಧಂತಿ ಪ್ರಯುಕ್ತ ಪವಮಾನ ಮಹಾಯಾಗ ಪರ್ಯಾಯ ಪೇಜಾವರ ಹಿರಿಯ ಮತ್ತು ಕಿರಿಯ ಯತಿಗಳ ಉಪಸ್ಥಿತಿಯಲ್ಲಿ ನಡೆಯಿತು. ಅಪರಾಹ್ನ ವಿಶೇಷಅನ್ನ ಸಂತರ್ಪಣೆಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News