×
Ad

ಮುಖ್ಯ ಆರ್ಥಿಕ ಸಲಹೆಗಾರರು ಕೂಡಾ ಮೂರ್ಖರೇ?: ಪ್ರಧಾನಿಗೆ ಚಿದಂಬರಂ ಪ್ರಶ್ನೆ

Update: 2017-11-30 19:10 IST

ಹೊಸದಿಲ್ಲಿ, ನ.30: “ಇತ್ತೀಚೆಗೆ ಸೃಷ್ಠಿಯಾಗಿರುವ ಕೆಲವು ಆರ್ಥಿಕ ತಜ್ಞರು ಜಿಎಸ್‌ಟಿ ದರವನ್ನು ಏಕರೂಪವಾಗಿ 18% ಎಂದು ನಿಗದಿಪಡಿಸಬೇಕು ಎಂಬ ಮಹಾನ್ ಮೂರ್ಖತನದ ಮಾತನ್ನು ಆಡುತ್ತಿದ್ದಾರೆ” ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಎದಿರೇಟು ನೀಡಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ಹಾಗಾದರೆ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ಕೂಡಾ ಮೂರ್ಖರೇ ಎಂದು ಪ್ರಶ್ನಿಸಿದ್ದಾರೆ.

ಗುಜರಾತ್‌ನಲ್ಲಿ ಬುಧವಾರದಂದು ನಾಲ್ಕು ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದ ಮೋದಿ, ಜಿಎಸ್‌ಟಿ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಟೀಕೆಗಳಿಗೆ ಪ್ರತ್ಯುತ್ತರವಾಗಿ ಈ ಮಾತುಗಳನ್ನು ಆಡಿದ್ದರು.

ಇದಕ್ಕೆ ಖಾರವಾಗಿ ಉತ್ತರ ನೀಡಿದ ಚಿದಂಬರಂ ಜಿಎಸ್‌ಟಿ ದರವನ್ನು ಏಕರೂಪವಾಗಿ 18%ಗೆ ನಿಗದಿಪಡಿಸಬೇಕು ಎಂಬ ಸಲಹೆಯು ಮೂರ್ಖತನದ್ದಾಗಿದ್ದರೆ ಸರಕಾರದ ಮುಖ್ಯ ಸಲಹೆಗಾರರಾದ ಡಾ. ಅರವಿಂದ್ ಸುಬ್ರಹ್ಮಣ್ಯನ್ ಮತ್ತು ಇತರ ಅನೇಕ ಅರ್ಥಶಾಸ್ತ್ರಜ್ಞರು ಕೂಡಾ ಮೂರ್ಖರೇ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

 ಆದಾಯ ತಟಸ್ಥ ದರದ (ರೆವೆನ್ಯೂನ್ಯೂಟ್ರಲ್ ರೇಟ್) ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರರ ವರದಿಯನ್ನು ಪ್ರಧಾನಿಯವರು ಓದಿಲ್ಲವೇ? ಮುಖ್ಯ ಆರ್ಥಿಕ ಸಲಹೆಗಾರರು 15-15.5% ಆರ್‌ಎನ್‌ಆರ್ ದರವನ್ನು ನಿಗದಿಪಡಿಸುವ ಸಲಹೆ ನೀಡಿಲ್ಲವೇ? ಹಾಗಾಗಿ ಸಾಮಾನ್ಯ ಜಿಎಸ್‌ಟಿ ದರವು 15% ಆಗಿದ್ದು ಲಕ್ಸುರಿ ವಸ್ತುಗಳ ಮೇಲಿನ ಆರ್‌ಎನ್‌ಆರ್ ದರವು 18% ಯಾಕಿರಬಾರದು ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ತೆರಿಗೆ ಮತ್ತು ವೆಚ್ಚ ಬಿಜೆಪಿ ಸರಕಾರದ ತತ್ವವಾಗಿದೆ ಎಂದು ಹೇಳಿದ ಮಾಜಿ ವಿತ್ತ ಸಚಿವ ಕಚ್ಚಾತೈಲದ ಬೆಲೆ ಶೇಕಡಾ 50 ಇಳಿಕೆಯಾದಾಗ ಪೆಟ್ರೋಲ್ ಮತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News