ಕಾಶ್ಮೀರದ ಭಾಗ ಪಾಕ್ ನಲ್ಲಿ, ಅರುಣಾಚಲ ಪ್ರದೇಶದ ಭಾಗ ಚೀನಾದಲ್ಲಿ!
ಕೋಲ್ಕತಾ, ನ.30: ಪಶ್ಚಿಮ ಬಂಗಾಲದ ಶಾಲೆಯೊಂದರಲ್ಲಿ ನಡೆದ ಭೂಗೋಳಶಾಸ್ತ್ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಭೂಪಟದಲ್ಲಿ ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನದಲ್ಲಿ ಹಾಗೂ ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಚೀನಾದಲ್ಲಿ ಗುರುತಿಸಲಾಗಿದೆ ಎಂದು ಆರೋಪಿಸಲಾಗಿದೆ.
ತೃಣಮೂಲ ಕಾಂಗ್ರೆಸ್(ಟಿಎಂಸಿ) ನೇತೃತ್ವದ ಶಿಕ್ಷಕರ ಘಟಕವು ಈ ಭೂಪಟ ತಯಾರಿಸಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾದ ಈ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ,ಅಕ್ಸಾಯ್ ಚಿನ್, ಅರುಣಾಚಲಪ್ರದೇಶದ ಕೆಲವು ಪ್ರದೇಶಗಳನ್ನು ಭಾರತದಿಂದ ಹೊರಗೆ ಗುರುತಿಸಲಾಗಿದೆ. ಈ ಭೂಪಟದಲ್ಲಿರುವ ವಾಟರ್‌ಮಾರ್ಕ್‌ನಲ್ಲಿ ‘ಡಬ್ಲೂಬಿಬಿಎಸ್‌ಸಿ’(ಪಶ್ಚಿಮ ಬಂಗಾಲ ಎಸ್ಸೆಸ್ಸೆಲ್ಸಿ ಶಿಕ್ಷಣ ಮಂಡಳಿ) ಹೆಸರಿದೆ ಎಂದು ಪಶ್ಚಿಮ ಬಂಗಾಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಬ್ಯಾನರ್ಜಿ ಆರೋಪಿಸಿದ್ದಾರೆ.
ಭಾರತದ ಪ್ರದೇಶಗಳನ್ನು ತಮ್ಮದೆಂದು ಹಕ್ಕು ಸಾಧಿಸುತ್ತಿರುವ ಪಾಕಿಸ್ತಾನ ಹಾಗೂ ಚೀನಾದ ವಾದವನ್ನು ಪಶ್ಚಿಮ ಬಂಗಾಲ ಸರಕಾರ ಒಪ್ಪಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದ ಬ್ಯಾನರ್ಜಿ, ಈ ತಪ್ಪಿನ ಬಗ್ಗೆ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮಾಹಿತಿ ನೀಡಲಾಗುವುದು. ಇಲ್ಲಿ ನಡೆದಿರುವುದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ಕಾರ್ಯವಾಗಿದೆ ಎಂದರು.
ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವದ ಕುರುಹು ಇಲ್ಲ. ಇಲ್ಲಿ ಕೇವಲ ತೃಣಮೂಲ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ರಾಜ್ಯಕ್ಕೆ ಬಂದಿರುವ ಭಯೋತ್ಪಾದಕರನ್ನು ರಾಜ್ಯ ಸರಕಾರ ಬೆಂಬಲಿಸುತ್ತಿರುವಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬ್ಯಾನರ್ಜಿ ಹೇಳಿಕೆಗೆ ಧ್ವನಿಗೂಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹ, ಟಿಎಂಸಿ ದೇಶ ಸ್ವಯಂ ಒಡೆಯಬೇಕೆಂದು ಬಯಸುತ್ತಿದೆ ಎಂದು ಆರೋಪಿಸಿದ್ದು ಘಟನೆಯ ಬಗ್ಗೆ ಮುಖ್ಯಮಂತರಿ ಮಮತಾ ಬ್ಯಾನರ್ಜಿ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.