ಉಮ್ರಾ ಯಾತ್ರಾರ್ಥಿ ನಿಧನ
ಮಂಗಳೂರು, ನ.30: ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದ ಪಾವೂರು ಗ್ರಾಮದ ಇನೋಳಿ ನಿವಾಸಿ ಹಾಜಿ ಅಬ್ದುಲ್ ಹಮೀದ್ (69) ಮಕ್ಕಾದ ಹರಂನಲ್ಲಿ ಕಳೆದ ಶುಕ್ರವಾರ ನಿಧನರಾಗಿದ್ದಾರೆ.
ಪಜೀರ್, ಮೂಡಿಗೆರೆಯ ಹ್ಯಾಂಡ್‌ಪೋಸ್ಟ್, ಬಜ್ಪೆ, ಬೇಕನಹಳ್ಳಿ, ಚಿಕ್ಕಮಗಳೂರಿನ ಸಂಗೀನ್ ಜುಮಾ ಮಸೀದಿ, ಬಯಲುಪೇಟೆ ದರ್ಗಾ ಮಸೀದಿ ಸಹಿತ ವಿವಿಧ ಮಸೀದಿಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದ ಇವರು ಪತ್ನಿ, ನಾಲ್ವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಳೆದ ಗುರುವಾರ ಸಂಜೆ 55 ಮಂದಿಯ ತಂಡದ ಜೊತೆ ಮಂಗಳೂರಿನಿಂದ ಮಕ್ಕಾ ಯಾತ್ರೆಗೆ ಹೋಗಿದ್ದ ಅವರು ತಡರಾತ್ರಿ ಮಕ್ಕಾ ತಲುಪಿದ್ದರು.ಬೆಳಗ್ಗೆ ನಮಾಝ್ ಮುಗಿಸಿ ಹೊರಗಡೆ ಹೋಗಿ ಬರುವುದಾಗಿ ತಂಡದ ಇತರ ಸದಸ್ಯರಿಗೆ ತಿಳಿಸಿ ಮಕ್ಕಾದ ಹರಂಗೆ ಹೋಗಿ ಬಳಿಕ ನಾಪತ್ತೆಯಾಗಿದ್ದರು. ಈ ಸಂದರ್ಭ ಗುರುತು ಚೀಟಿ, ಮೊಬೈಲ್ ಸಹಿತ ಎಲ್ಲ ವಸ್ತುಗಳನ್ನೂ ಕೋಣೆಯಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರನ್ನು ಪತ್ತೆ ಹಚ್ಚಲು ತಂಡ ಹಾಗೂ ಏಜೆನ್ಸಿಗೆ ಸಾಧ್ಯವಾಗಿರಲಿಲ್ಲ. ನಾಲ್ಕು ದಿನ ನಿರಂತರ ಹುಡುಕಾಟ ನಡೆಸಿದ ಬಳಿಕ ಅವರ ಭಾವಚಿತ್ರ ಕಂಡ ಪಹರೇದಾರರು ನಿಧನದ ಮಾಹಿತಿ ನೀಡಿದ್ದರು. ಅದರಂತೆ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಅಬ್ದುಲ್ ಹಮೀದ್ ಮೃತಪಟ್ಟಿರುವುದು ದೃಢಪಟ್ಟಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.