×
Ad

ತಿಂಗಳೊಳಗೆ ನಗರಸಭೆ ವ್ಯಾಪ್ತಿಯಲ್ಲಿನ ಗೂಡಂಗಡಿಗಳ ಸರ್ವೆ

Update: 2017-11-30 19:34 IST

ಉಡುಪಿ, ನ.30: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ಗೂಡಂಗಡಿಗಳ ಬಗ್ಗೆ ಒಂದು ತಿಂಗಳೊಳಗೆ ಸರ್ವೆ ನಡೆಸಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ಮತ್ತು ಶುಚಿತ್ವ ಕಾಪಾಡದ ಗೂಡಂಗಡಿಗಳನ್ನು ಸ್ಥಳೀಯ ಸದಸ್ಯರುಗಳ ಸೂಚನೆ ಯಂತೆ ತೆರವುಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ತಿಳಿಸಿದ್ದಾರೆ.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ವಸಂತಿ ಶೆಟ್ಟಿ, ನಗರದ ಬ್ರಹ್ಮಗಿರಿಯಲ್ಲಿ ಅನೃಧಿಕೃತವಾಗಿ ತಲೆ ಎತ್ತಿರುವ ಗೂಡಂಗಡಿ ಯಲ್ಲಿ ತಯಾರಿಸುವ ಆಹಾರದಲ್ಲಿ ಶುಚಿತ್ವ ಇಲ್ಲ. ಇಲ್ಲಿ ಜನಸಂದಣಿ ಹೆಚ್ಚಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಅನಧಿಕೃತ ಗೂಡಂಗಡಿಗಳ ಬಗ್ಗೆ ಪತ್ರ ಬರೆದರೆ ಕ್ರಮ ಜರಗಿಸಲಾಗುವುದು ಎಂದರು.

ಪೌರಾಯುಕ್ತ ಡಿ.ಮಂಜುನಾಥಯ್ಯ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯೊಳಗೆ ನಗರಸಭೆಯ ಎಲ್ಲ 35ವಾರ್ಡ್‌ಗಳಲ್ಲಿಯೂ ಗೂಡಂಗಡಿ ಬಗ್ಗೆ ಸರ್ವೆ ನಡೆಸಲಾಗುವುದು. ಇದರಲ್ಲಿ ರಸ್ತೆ ಬದಿಯಲ್ಲಿ ಅನಧಿಕೃತ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಮತ್ತು ಆಹಾರದಲ್ಲಿ ಶುಚಿತ್ವ ಕಾಪಾಡದ ಗೂಡಂಗಡಿಗಳಿದ್ದರೆ ಅವುಗಳನ್ನು ಸ್ಥಳೀಯ ಸದಸ್ಯರ ಸೂಚನೆಯಂತೆ ತೆರವು ಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟಿನ್‌ಗೆ ಉಡುಪಿ ನಗರಸಭೆ ವ್ಯಾಪ್ತಿಯ ಉಡುಪಿ ಮತ್ತು ಮಣಿಪಾಲದಲ್ಲಿ ನೀಡಿರುವ ಜಾಗಕ್ಕೆ ನಗರಸಭೆಯಿಂದ ಅನುಮತಿ ಪಡೆದು ಕೊಳ್ಳಲಾಗಿದೆಯೇ ಎಂದು ಯಶ್ಪಾಲ್ ಸುವರ್ಣ ಪ್ರಶ್ನಿಸಿದರು. ಇದು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರವಾಗಿದ್ದು, ಇದರ ಎಲ್ಲ ಅಧಿಕಾರ ಜಿಲ್ಲಾಧಿ ಕಾರಿಗಳಿಗೆ ನೀಡಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಹಿಂದೂ ಸಮಾಜೋತ್ಸವ ನಡೆಯುವ ಸಂದರ್ಭದಲ್ಲಿ ಎರಡು ದಿನ ನೀರಿನ ಸಮಸ್ಯೆ ಉಂಟಾಗಿ ಸಂತರಿಗೆ ತೊಂದರೆಯಾಯಿತು ಎಂದು ಶ್ಯಾಮ್‌ಪ್ರಸಾದ್ ಕುಡ್ವ ಆರೋಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಪರಿಸರ ಇಂಜಿನಿಯರ್ ರಾಘವೇಂದ್ರ, ಬಜೆ ಅಣೆಕಟ್ಟಿನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ನೀರು ಸರಬ ರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಯಾವುದೇ ಸಮಸ್ಯೆ ಆಗದಂತೆ ಕೂಡಲೇ ಸರಿಪಡಿಸಲಾಗಿತ್ತು ಎಂದರು.

ಸಂತೆಕಟ್ಟೆಯಲ್ಲಿ 10ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಯಲ್ಲಿ ಮೀನು ಮಾರಾಟಗಾರರು ಕುಳಿತುಕೊಳ್ಳದೆ ಜಂಕ್ಷನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸದಸ್ಯ ಚಂದ್ರಕಾಂತ್ ದೂರಿದರು. ನಗರದಲ್ಲಿರುವ ದಾರಿದೀಪದ ಸಮಸ್ಯೆ ಬಗ್ಗೆ ಆನ್‌ಲೈನ್‌ನಲ್ಲಿ ದೂರು ನೀಡಿದರೆ ದುರಸ್ತಿ ಮಾಡಲಾಗುವುದು. ಅದು ಮಾಡದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಇದರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು ಯಶ್ಪಾಲ್ ಸುವರ್ಣ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈ ವಿಚಾರವನ್ನು ಆರ್‌ಟಿಎ ಮುಂದೆ ಇಡುವ ಬಗ್ಗೆ ನಿರ್ಣಯ ಮಾಡಿ ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಬೀಡಿನಗುಡ್ಡೆಯಲ್ಲಿ ಕಳೆದ ಒಂದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಯೋ ಗ್ಯಾಸ್‌ನಲ್ಲಿ ಉತ್ಪತ್ತಿಯಾದ ವಿದ್ಯುತ್‌ಗಳನ್ನು ಎಲ್ಲಿಗೆ ಬಳಸಲಾಗುತ್ತಿದೆ ಎಂದು ನವೀನ್ ಭಂಡಾರಿ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಪರಿಸರ ಇಂಜಿನಿಯರ್ ರಾಘವೇಂದ್ರ, ಇಲ್ಲಿ ಮೂರು ಮಂದಿ ಪೌರ ಕಾರ್ಮಿಕರು ಕೆಲಸಕ್ಕೆ ಇದ್ದು, ಪ್ರತಿದಿನ ಸಂಗ್ರಹವಾಗುವ 500-1000 ಟನ್ ಹಸಿರು ತ್ಯಾಜ್ಯ ವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ವಿದ್ಯುತ್‌ನ್ನು ಅಲ್ಲಿಯೇ ಬಳಸಲಾಗುತ್ತಿದೆ. ಇದು ತ್ಯಾಜ್ಯ ವಿಲೇವಾರಿಯ ಉದ್ದೇಶದಿಂದ ಮಾಡಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News