×
Ad

"ಭೂ ನ್ಯಾಯ ಮಂಡಳಿ ಬೈಠಕ್ ಸ್ಥಗಿತಕ್ಕೆ ಶಾಸಕಿ ಶಕುಂತಳಾ ಕಾರಣ"

Update: 2017-11-30 19:36 IST

ಪುತ್ತೂರು,ನ.30 : ವಾರಕ್ಕೊಮ್ಮೆ ನಡೆಯುತ್ತಿದ್ದ ಪುತ್ತೂರು ಭೂ ನ್ಯಾಯ ಮಂಡಳಿ ಸಮಿತಿಯ ಬೈಠಕ್ ಕಳೆದ 2 ತಿಂಗಳಿಂದ ನಡೆಯದೆ ಯಾವುದೇ ತೀರ್ಮಾನ ಕೈಗೊಳ್ಳಲಾಗದ ಕಾರಣ ಬಡ ಗೇಣಿದಾರರಿಗೆ ಅನ್ಯಾಯವಾಗುತ್ತಿದೆ. ಈ ಸ್ಥಿತಿ ನಿರ್ಮಾಣಕ್ಕೆ ಸಂಸದೀಯ ಕಾರ್ಯದರ್ಶಿಯಾಗಿರುವ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರೇ ಕಾರಣ ಎಂದು ಭೂನ್ಯಾಯ ಮಂಡಳಿಯ ಮಾಜಿ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಆರೋಪಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2014 ರ ಜನವರಿ 28 ರಂದು ಈಗಿನ ಸರ್ಕಾರದ ಭೂ ನ್ಯಾಯ ಮಂಡಳಿ ಸಮಿತಿ ರಚನೆಯಾಗಿದ್ದು, 4 ವರ್ಷಗಳಲ್ಲಿ ಕೆಲವು ತಿದ್ದುಪಡಿ ಹೊರತುಪಡಿಸಿ ಒಂದೇ ಒಂದು ತೀರ್ಮಾನ ಕೈಗೊಳ್ಳಲು ಸಮಿತಿಗೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ 3-4 ಮಂದಿ ಉಪವಿಭಾಗಾಧಿಕಾರಿಗಳು ಬಂದು ವರ್ಗಾವಣೆಯಾಗಿ ಹೋಗಿರುವುದೇ ಸಮಸ್ಯೆಗೆ ಮುಖ್ಯ ಕಾರಣವಾಗಿದೆ ಎಂದರು.

ಆದೇಶ ಉಲ್ಲಂಘನೆ-ಜಿಲ್ಲಾಧಿಕಾರಿಗೆ ದೂರು
ಎರಡು ತಿಂಗಳ ಹಿಂದೆ ಭೂ ನ್ಯಾಯ ಮಂಡಳಿ ಸಮಿತಿಯಿಂದ ತಮ್ಮನ್ನು ವಜಾಗೊಳಿಸಿ ಲಕ್ಷ್ಮಣ ಎಂಬವರನ್ನು ಆಯ್ಕೆ ಮಾಡಲಾಗಿದೆ. ಆದರೆ ನ್ಯಾಯಾಲಯದಿಂದ ಈ ಕ್ರಮಕ್ಕೆ ತಾನು ತಡೆಯಾಜ್ಞೆ ತಂದಿದ್ದೇನೆ. ಆದರೂ ನ್ಯಾಯಾಲಯದ ಆದೇಶವನ್ನು ಪಾಲಿಸದೆ ನಿಯಮ ಉಲ್ಲಂಘಿಸಲಾಗಿದೆ. ಶಾಸಕರು ತಹಶೀಲ್ದಾರರಿಗೆ ಒತ್ತಡ ಹೇರಿ ನ್ಯಾಯಾಲಯದ ಆದೇಶ ಪಾಲನೆಯಾಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ ಪುರುಷೋತ್ತಮ ರೈ ಅವರು ಈ ಕುರಿತು ಜಿಲ್ಲಾಧಿಕಾರಿಯವರಿಗೆ ದೂರು ನೀಡಿರುವುದಾಗಿ ತಿಳಿಸಿದರು. 

ಭೂ ನ್ಯಾಯ ಮಂಡಳಿ ಸಮಿತಿಗೆ ಹೊಸದಾಗಿ ನೇಮಿಸಿರುವವರನ್ನೇ ಮುಂದುವರೆಸಲು ಶಾಸಕರು ಇಚ್ಚಿಸಿದಲ್ಲಿ ತಾನೂ ಹೋರಾಟ ಮುಂದುವರೆಸುವುದಾಗಿ ಅವರು ಎಚ್ಚರಿಸಿದರು.  

ತಮ್ಮನ್ನು ಭೂನ್ಯಾಯ ಮಂಡಳಿಯ ಸದಸ್ಯತನದದಿಂದ ವಜಾಗೊಳಿಸಿರುವ ಕುರಿತು ಅ.7 ರಂದು ಮನೆಯ ಗೋಡೆಗೆ ನೋಟೀಸ್ ಅಂಟಿಸಿರುವುದಾಗಿ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಆದರೆ ತನಗೆ ಗ್ರಾಮಕರಣಿಕರು ಈ ಕುರಿತಾದ ನೊಟೀಸ್‍ನ್ನು ನೀಡಿರುವುದು ಅ.18 ರಂದು ಎಂದ ಅವರು ನೊಟೀಸ್ ನೀಡುವ ವಿಚಾರದಲ್ಲಿಯೂ ಅಧಿಕಾರಿಗಳು ಕಾನೂನು ನಿಯಮವನ್ನು ಮೀರಿದ್ದಾರೆ. ಈ ಕುರಿತು ರಾಜ್ಯ ಕಾರ್ಯದರ್ಶಿಯವರಿಗೂ ದೂರು ನೀಡಿದ್ದೇನೆ ಎಂದರು.

ನ್ಯಾಯ ಒದಗಿಸಿ
ಭೂ ನ್ಯಾಯ ಮಂಡಳಿಯ ಬೈಠಕ್ ಸರಿಯಾಗಿ ನಡೆಯದೇ ಇರುವುದರಿಂದ ಹಲವು ಮಂದಿ ಗೇಣಿದಾರರು ನ್ಯಾಯ ವಂಚಿತರಾಗಿದ್ದಾರೆ. ತಿದ್ದುಪಡಿಗಾಗಿ 6 ವರ್ಷಗಳಿಂದ ಕಾಯುತ್ತಿರುವವರು, ರಾಜಿಯಲ್ಲಿ ಮುಗಿಸಲು ಸಾಧ್ಯವಿದ್ದರೂ 40 ವರ್ಷಗಳಿಂದ ಮುಂದುವರೆದಿರುವ ಪ್ರಕರಣಗಳು ಇನ್ನೂ ಬಾಕಿ ಇವೆ ಎಂದ ಪುರುಷೋತ್ತಮ ರೈ ಅವರು  ಶಾಸಕರು ಮತ್ತು ಸರ್ಕಾರ  ಇವರಿಗೆ ನ್ಯಾಯ ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಗೌಡ ಬಡಗನ್ನೂರು, ಗುರ್ಮಣ್ಣ ಗೌಡ ಬಜತ್ತೂರು, ವೀರಪ್ಪ ಗೌಡ ಬಜತ್ತೂರು, ಬಾಪ ಕುಂಞಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News