ನಾಳೆಯಿಂದ ಆಳ್ವಾಸ್ ನುಡಿಸಿರಿ ಆರಂಭ

Update: 2017-11-30 14:34 GMT

ಮಂಗಳೂರು, ನ.30: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಮೋಹನ್ ಆಳ್ವರ ಸಾರಥ್ಯದಲ್ಲಿ ನಡೆಯುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನವಾದ 14ನೆ ‘ಆಳ್ವಾಸ್ ನುಡಿಸಿರಿ’ಯು ಡಿ.1ರಿಂದ ಆರಂಭಗೊಳ್ಳಲಿದ್ದು, ಡಿ.3ರವರೆಗೆ ನಡೆಯಲಿದೆ. ನಾಡು-ನುಡಿಯ ಎಚ್ಚರವನ್ನು, ಕನ್ನಡ ಸಂಸ್ಕೃತಿಯ ಕಂಪನ್ನು ಪಸರಿಸುವುದಕ್ಕಾಗಿ ಆಯೋಜಿಸಲಾದ ಈ ಸಮ್ಮೇಳನವನ್ನು ಡಿ.1ರಂದು ಬೆಳಗ್ಗೆ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯ ಎಂ. ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಖ್ಯಾತ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಉದ್ಘಾಟಿಸಲಿದ್ದಾರೆ.

ಕನ್ನಡದ ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್‌ರ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ ಸುಮಾರು 8:30ಕ್ಕೆ ನಡೆಯುವ ಸಾಂಸ್ಕೃತಿಕ ಮೆರವಣೆಗೆಯನ್ನು ಮುಲ್ಕಿ ಚರ್ಚ್‌ನ ಧರ್ಮಗುರು ಫಾ.ಎಫ್.ಎಕ್ಸ್.ಗೋಮ್ಸ್ ಉದ್ಘಾಟಿಸಲಿದ್ದು, ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಧ್ವಜಾರೋಹಣ ಮಾಡಲಿದ್ದಾರೆ.

ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ 3 ಪ್ರಮುಖ ಗೋಷ್ಠಿಗಳು, 7 ವಿಶೇಷ ಉಪನ್ಯಾಸಗಳು, 9 ಪ್ರಸಿದ್ಧ ಕವಿಗಳಿಂದ ಕವಿಸಮಯ-ಕವಿನಮನ ಕಾರ್ಯಕ್ರಮ, 2 ಸಂಸ್ಮರಣೆ ಕಾರ್ಯಕ್ರಮ, ಶತಮಾನದ 2 ನಮನ ಕಾರ್ಯಕ್ರಮ, ನನ್ನ ಕತೆ ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ಮೂವರು ಸಾಧಕರ ಮನದಾಳದ ಮಾತುಗಳು ಹಾಗೂ 15 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ.

ಇದರೊಂದಿಗೆ ಆಳ್ವಾಸ್ ಕೃಷಿಸಿರಿ, ಆಳ್ವಾಸ್ ವಿದ್ಯಾರ್ಥಿ ಸಿರಿಯೂ ಕಾರ್ಯಕ್ರಮಕ್ಕೆ ಮೆರಗು ನೀಡಲಿದೆ. ಕೃಷಿ ಸಿರಿಯಲ್ಲಿ ಜಾನುವಾರು ಪ್ರದರ್ಶನ, ಬೆಕ್ಕುಗಳ ಪ್ರದರ್ಶನ, ಬೆಕ್ಕುಗಳ ಸೌಂದರ್ಯ ಪ್ರದರ್ಶನ, ಶ್ವಾನ-ಶ್ವಾನಮರಿ-ಶ್ವಾನ ಪ್ರಾಮಾಣಿಕತೆ ಹಾಗೂ ಶ್ವಾನ ಸೌಂದರ್ಯ ಪ್ರದರ್ಶನ, 600ಕ್ಕೂ ಮಿಕ್ಕಿ ಬೃಹತ್ ಮತ್ಸ್ಯಾಲಯಗಳ ಮೂಲಕ ಮತ್ಸ್ಯಪ್ರದರ್ಶನ, 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳ ಪ್ರದರ್ಶನ, ದೇಶಿ ಪಕ್ಷಿ ಬೋನ್ಸಾಯಿ ಕೃಷಿ ಪುಷ್ಪ, ನ್ಯೂಜಿಲ್ಯಾಂಡ್ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣದ ಸಸ್ಯಗಳು-ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿ ರಚನೆ-44 ತಳಿ ಬಿದಿರು ಗಿಡ - 40 ತಳಿ ಬಿದಿರು, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳು-ಎರಡು ಎಕರೆ ಪ್ರದೇಶದಲ್ಲಿ ನೈಜ ತರಕಾರಿ ಕೃಷಿ, 250ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

 ಜೊತೆಗೆ ರಾಜ್ಯದ 35 ಚಿತ್ರಕಲಾವಿದರಿಂದ ಆಳ್ವಾಸ್ ಚಿತ್ರಸಿರಿ, ದೇಶದ 2,000ಕ್ಕೂ ಅಧಿಕ ಛಾಯಾಚಿತ್ರಕಾರರ ಛಾಯಾಚಿತ್ರಗಳ ಪ್ರದರ್ಶನ ಮತ್ತು ಸ್ಪರ್ಧೆಯ ಆಳ್ವಾಸ್ ಛಾಯಾಚಿತ್ರಸಿರಿ, ಚುಕ್ಕಿ ಚಿತ್ರ ಕಲಾವಿದರ ಚುಕ್ಕಿ ಚಿತ್ರಗಳ ರಚನೆ ಮತ್ತು ಪ್ರದರ್ಶನದ ಆಳ್ವಾಸ್ ಚುಕ್ಕಿ ಚಿತ್ರಸಿರಿ, ಗಾಳಿಪಟೋತ್ಸವದ ಆಳ್ವಾಸ್ ಗಾಳಿಪಟ ಸಿರಿ, ಎಸೆಸೆಲ್ಸಿವರೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗಾಗಿ ಪ್ರಥಮ ಬಾರಿಗೆ ಉದ್ಯೋಗಾವಕಾಶ ನೀಡುವ ಆಳ್ವಾಸ್ ಉದ್ಯೋಗಸಿರಿ, ಕನ್ನಡ ನಾಟಕಗಳ ಪ್ರದರ್ಶನ ‘ಆಳ್ವಾಸ್ ರಂಗಸಿರಿ’, ಕನ್ನಡ ಚಲನಚಿತ್ರ ಪ್ರದರ್ಶನದ ‘ಆಳ್ವಾಸ್ ಸಿನಿಸಿರಿ’, ರಾಜ್ಯದ 30 ವ್ಯಂಗ್ಯಚಿತ್ರ ಕಲಾವಿದರಿಂದ ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನದ ಆಳ್ವಾಸ್ ವ್ಯಂಗ್ಯಚಿತ್ರ ಸಿರಿ, ಗೂಡುದೀಪಗಳ ಪ್ರದರ್ಶನದ ಆಳ್ವಾಸ್ ಗೂಡುದೀಪ ಸಿರಿ, ಯಕ್ಷಗಾನ ಪ್ರದರ್ಶನದ ಆಳ್ವಾಸ್ ಯಕ್ಷಸಿರಿ, ವಿವಿಧ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ ಆಳ್ವಾಸ್ ವಿಜ್ಞಾನಸಿರಿಗಳು ಮೇಳೈಸಲಿದೆ. 12 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News