ಪದ್ಮಾವತಿ ವಿವಾದ: ಸಂಸದೀಯ ಸಮಿತಿಗಳನ್ನು ಭೇಟಿಯಾದ ಬನ್ಸಾಲಿ,ಜೋಷಿ

Update: 2017-11-30 14:59 GMT

ಹೊಸದಿಲ್ಲಿ,ನ.30: ತೀವ್ರ ವಿವಾದವನ್ನು ಸೃಷ್ಟಿಸಿರುವ ‘ಪದ್ಮಾವತಿ’ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರು ಗುರುವಾರ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯನ್ನು ಮತ್ತು ಸೆನ್ಸಾರ್ ಮಂಡಳಿಯ ಮುಖ್ಯಸ್ಥ ಪ್ರಸೂನ ಜೋಷಿ ಅವರು ತಕರಾರುಗಳ ಕುರಿತ ಲೋಕಸಭಾ ಸಮಿತಿಯನ್ನು ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಜೋಷಿ ಅವರು ಪರೇಶ್ ರಾವಲ್, ರಾಜ್ ಬಬ್ಬರ್ ಮತ್ತು ಅನುರಾಗ್ ಠಾಕೂರ್‌ರಂತಹ ಸಂಸದರನ್ನೊಳಗೊಂಡಿರುವ ಐಟಿ ಸಮಿತಿಯನ್ನೂ ಭೇಟಿಯಾಗಿದ್ದರು.

‘ಪದ್ಮಾವತಿ’ ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಸೆನ್ಸಾರ್ ಮಂಡಳಿಯು ಚಿತ್ರದ ಟ್ರೇಲರ್ ಮತ್ತು ಪ್ರೊಮೊಗಳಿಗೆ ಮಾತ್ರ ಅನುಮತಿ ನೀಡಿದೆ ಎಂದು ಜೋಷಿ ಲೋಕಸಭಾ ಸಮಿತಿಗೆ ತಿಳಿಸಿದರು.

ಟ್ರೇಲರ್‌ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ ಕೆಲವು ಸದಸ್ಯರು, ಚಿತ್ರದೊಂದಿಗೆ ಅದನ್ನೂ ನಿಷೇಧಿಸುವಂತೆ ಆಗ್ರಹಿಸಿದರು. ಆದರೆ ಚಿತ್ರವನ್ನು ತಾನಿನ್ನೂ ವೀಕ್ಷಿಸಿಲ್ಲ ಎಂದು ಜೋಷಿ ಸಮಿತಿಗೆ ತಿಳಿಸಿದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಭಾರತದಲ್ಲಿಯೇ ಸೆನ್ಸಾರ್ ಸರ್ಟಿಫಿಕೇಟ್ ದೊರಕಿಲ್ಲ, ಹೀಗಿರುವಾಗ ಚಿತ್ರವು ಬ್ರಿಟನ್‌ಗೆ ತಲುಪಿದ್ದು ಹೇಗೆ ಎಂಬ ಕೆಲವು ಸದಸ್ಯರ ಪ್ರಶ್ನೆಗೆ ಜೋಷಿ, ಅದು ಸ್ವತಂತ್ರ ಪ್ರಕ್ರಿಯೆಯಾಗಿದೆ ಎಂದು ಉತ್ತರಿಸಿದರು.

ರಾಜಸ್ಥಾನದ ಇಬ್ಬರು ಬಿಜೆಪಿ ಸಂಸದರಾದ ಸಿ.ಪಿ.ಜೋಷಿ ಮತ್ತು ಓಂ ಬಿರ್ಲಾ ಅವರು ಚಿತ್ರದಲ್ಲಿಯ ‘ಆಕ್ಷೇಪಾರ್ಹ ವಿಷಯ’ದ ಕುರಿತು ತಕರಾರನ್ನು ಸಲ್ಲಿಸಿದ ನಂತರ ಲೋಕಸಭಾ ಸಮಿತಿಯು ವಾರ್ತಾ ಮತ್ತು ಪ್ರಸಾರ ಸಚಿವಾಲಯದಿದ ಹಾಗೂ ಸೆನ್ಸಾರ್ ಮಂಡಳಿಯಿಂದ ವರದಿಗಳನ್ನು ಕೇಳಿತ್ತು. ವಾಣಿಜ್ಯಿಕ ಉದ್ದೇಶಗಳಿಗಾಗಿ ಇಂತಹ ವಿವಾದಗಳನ್ನು ಆಗಾಗ್ಗೆ ಸೃಷ್ಟಿಸಲಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಿರಿಯ ಬಿಜೆಪಿ ನಾಯಕ ಭಗತ ಸಂಗ್ ಕೋಷಿಯಾರಿ ಸೇರಿದಂತೆ ಲೋಕಸಭಾ ಸಮಿತಿಯ ಎಂಟು ಸದಸ್ಯರು ಮತ್ತು ಇಬ್ಬರು ದೂರುದಾರರು ಸಭೆಯಲ್ಲಿ ಹಾಜರಿದ್ದರು. ಬಿಜೆಪಿಯ ಇಬ್ಬರು ಮತ್ತು ಶಿವಸೇನೆಯ ಓರ್ವ ಸದಸ್ಯರು ಚಿತ್ರಕ್ಕೆ ವಿರುದ್ಧವಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಬನ್ಸಾಲಿಗೆ ತರಾಟೆ

30 ಸದಸ್ಯರ ಐಟಿ ಸಮಿತಿಯು ಬನ್ಸಾಲಿಯವರನ್ನು ತೀವ್ರ ತರಾಟೆಗೆತ್ತಿಕೊಂಡಿತೆಂದು ಮೂಲಗಳು ತಿಳಿಸಿದವು. ಆಯ್ದ ಮಾಧ್ಯಮಗಳ ಮುಂದೆ ಚಿತ್ರದ ಪ್ರದರ್ಶನವು ಸೆನ್ಸಾರ್ ಮಂಡಳಿಯ ಮೇಲೆ ಪ್ರಭಾವವನ್ನು ಬೀರುವ ಉದ್ದೇಶ ಹೊಂದಿತ್ತೇ ಎಂದು ಬನ್ಸಾಲಿಯವರನ್ನು ಪ್ರಶ್ನಿಸಿದ ಅದು, ಇದು ನ್ಯಾಯಯುತ ಮತ್ತು ನೈತಿಕ ಕೃತ್ಯವೇ ಎಂದೂ ಪ್ರಶ್ನಿಸಿತು.

ನೀವು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕೋರಿ ನ.11ರಂದು ಅರ್ಜಿ ಸಲ್ಲಿಸಿರುವಾಗ ಡಿ.1ರಂದು ಚಿತ್ರವನ್ನು ಬಿಡುಗಡೆಗೊಳಿಸಬಹುದು ಎಂದು ಹೇಗೆ ಭಾವಿಸಿದ್ದೀರಿ? ಸಿನಿಮಾಟೋಗ್ರಫಿ ಕಾಯ್ದೆಯಂತೆ ಚಿತ್ರವೊಂದಕ್ಕೆ ಪ್ರಮಾಣಪತ್ರವನ್ನು ನೀಡಲು ಮಂಡಳಿಯು 68 ದಿನಗಳ ಕಾಲಾವಕಾಶವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ ಸಮಿತಿಯು, ನಿಮ್ಮ ಚಿತ್ರಗಳು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿರುವಂತಿದೆ. ಚಿತ್ರದ ಕುರಿತ ವಿವಾದವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೆಚ್ಚಿನ ಜಾಗ ಪಡೆಯುತ್ತಿದೆ ಎಂದು ಹೇಳಿತು ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News