ಮಣ್ಣಿನ ಪರೀಕ್ಷಾ ಕೇಂದ್ರ ಸ್ಥಾಪನೆಯಾಗಲಿ ಹರ್ಷೇಂದ್ರ ಕುಮಾರ್
ಮೂಡುಬಿದಿರೆ(ಮುಂಡ್ರುದೆ ಗುತ್ತು ರಾಮಮೋಹನ ರೈ ಕೃಷಿ ಆವರಣ),ನ.30 :ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಣ್ಣಿನ ಅಂಶ ತಿಳಿಯಲು ಸಹಕಾರಿಯಾಗಬಲ್ಲ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಯಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆ ಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ಗುರುವಾರ ನಡೆದ ಆಳ್ವಾಸ್ ಕೃಷಿ ಸಿರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ಬಗ್ಗೆ ತಿಳಿದುಕೊಳ್ಳಲು ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆಯಿಂದ ಕೃಷಿಕರಿಗೆ ಮತ್ತು ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.
ಇದಕ್ಕೂ ಮುನ್ನ ಶಾಸಕ ಅಭಯಚಂದ್ರ ಜೈನ್ ತೆಂಗಿನ ಗರಿ ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಕೃಷಿ ಸಿರಿಗೆ ಚಾಲನೆ ನೀಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ , ಬೆಂಗಳೂರು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್ ಪ್ರಕಾಶ್ ಕಮ್ಮರಗಿ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ವೇಣುಗೋಪಾಲ್, ಮಂಗಳೂರು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಆನಂದ, ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕರ್ನಾಟಕ ರಾಜ್ಯ ರೈತ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ಧನಕೀರ್ತಿ ಬಲಿಪ, ಎಸ್ ಕೆಡಿಆರ್ ಡಿಪಿ ಕಾರ್ಕಳ ವಲಯ ಇದರ ಯೋಜನಾಧಿಕಾರಿ ಕೃಷ್ಣಯ್ಯ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವಾ ಸ್ವಾಗತಿಸಿದರು.