ಮಣಿಪಾಲ: ವಿವಿಧ ಕ್ರೀಡೆಗಳಲ್ಲಿ ಪದಕ ಜಯಿಸಿದ ವಿಶೇಷ ಮಕ್ಕಳಿಗೆ ಸನ್ಮಾನ
ಮಣಿಪಾಲ, ನ.30: ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಶೀಘ್ರವೇ ಬೆಂಗಳೂರಿ ನಲ್ಲಿ ಅಧಿಕಾರಿಗಳು ಹಾಗೂ ವಿಶೇಷ ಮಕ್ಕಳ ಕ್ರೀಡಾ ಚಟುವಟಿಕೆಗಳಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
2016ರ ಮಾರ್ಚ್ ತಿಂಗಳಿನಿಂದ ಇತ್ತೀಚಿನವರೆಗೆ ವಿವಿಧ ರಾಜ್ಯಗಳಿಗೆ ತೆರಳಿ ಸ್ಪೆಷಲ್ ಒಲಿಂಪಿಕ್ಸ್‌ನ ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿ ಪದಕ ಜಯಿಸಿದ ರಾಜ್ಯದ ವಿಶೇಷ ಕ್ರೀಡಾಪಟುಗಳಿಗೆ ಸ್ಪೆಷಲ್ ಒಲಿಂಪಿಕ್ಸ್ ರಾಜ್ಯ ಸಂಸ್ಥೆಯ (ಎಸ್‌ಒಬಿಕೆ) ವತಿಯಿಂದ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಕ್ರೀಡಾಪಟುಗಳನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.
ಎಲ್ಲ ಅಂಗಾಂಗಗಳು ಸರಿ ಇದ್ದವರು ಸಾಧನೆ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಅಂಗವೈಕಲ್ಯತೆ ಇರುವವರು ಸಾಧನೆ ಮಾಡುವುದು ಸಾಮಾನ್ಯದ ವಿಷಯವಲ್ಲ. ಅದು ಮಹಾನ್ ಸಾಧನೆಯೇ ಸರಿ. ಇಂಥಾ ಮಕ್ಕಳನ್ನು ತರಬೇತಿಗೊಳಿಸುವವರು ಕೂಡ ನಿಜವಾದ ಸಾಧಕರು ಎಂದರು.
ವಿಶೇಷ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು. ಪ್ಯಾರಾ ಒಲಿಂಪಿಕ್ಸ್ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಬಜೆಟ್‌ನಲ್ಲಿ 4 ಕೋಟಿ ರೂ. ಅನುದಾನ ಮೀಲಿಡಲಾಗಿದೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದ 76 ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸಿದ 81 ವಿಶೇಷ ಕ್ರೀಡಾಪಟುಗಳನ್ನು ಹಾಗೂ 24 ತರಬೇತುದಾರರನ್ನು ಸನ್ಮಾನಿಸಲಾಯಿತು. ಚಿನ್ನದ ಪದಕಗಳನ್ನು ಪಡೆದ ಅರ್ಚನಾ ಜೈವಿಠಲ್, ಅಸ್ಮಿತ್ ಶೆಟ್ಟಿ, ಪ್ರಜ್ವಲ್ ಲೋಬೊ, ಬೆಳ್ಳಿ ಪದಕ ಪಡೆದ ರೋಹಿತ್ ಕೆ., ಎಸ್.ದಾಸ್‌ರನ್ನು ಗೌರವಿ ಸಲಾಯಿತು. ಇವರೊಂದಿಗೆ ಮಣಿಪಾಲ ಜೈವಿಠಲ್ ಕುಟುಂಬವನ್ನು ಸಚಿವರು ವಿಶೇಷವಾಗಿ ಗೌರವಿಸಿದರು.
ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಸಿಂಡಿಕೇಟ್ ಬ್ಯಾಂಕ್‌ನ ಮಹಾಪ್ರಬಂಧಕ ಸತೀಶ್ ಕಾಮತ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಎಸ್‌ಒಬಿಕೆಯ ಪದಾಧಿಕಾರಿಗಳಾದ ಮಹಾಬಲ ಮಾರ್ಲ, ಮಹಮ್ಮದ್ ಬಶೀರ್, ಜಗದೀಶ್ ಶೆಟ್ಟಿ, ಆಗ್ನೇಶ್ ಕುಂದರ್, ಸಿಸ್ಟರ್ ಮರಿಯಾ ಶ್ರುತಿ ಉಪಸ್ಥಿತರಿದ್ದರು.ಎಸ್‌ಒಬಿಕೆಯ ಸಂಸ್ಥೆಯ ವಲಯ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಕೆ.ಎಸ್. ಜೈವಿಠಲ್ ಸ್ವಾಗತಿಸಿದರು. ಕಾಂತಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.