×
Ad

ಸೈಂಟ್ ಮೇರಿಸ್‌ನಲ್ಲಿ ಪರಿಸರ ಸ್ನೇಹಿ ಪ್ರವಾಸ ಉದ್ಘಾಟನೆ

Update: 2017-11-30 21:32 IST

ಮಲ್ಪೆ, ನ.30:ದೇಶದ ಅಗ್ರಗಣ್ಯ ಪ್ರವಾಸಿ ತಾಣಗಳಲ್ಲಿ ಒಂದಾದ ಇಲ್ಲಿಗೆ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಪ್ರವಾಸಕ್ಕೆ ಉತ್ತೇಜನ ನೀಡಲು ಮಲ್ಪೆ ಅಭಿವೃದ್ಧಿ ಸಮಿತಿಯ ಮೂಲಕ ಅನುಷ್ಠಾನಗೊಳಿಸಲಾದ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಸಂಜೆ ಸೈಂಟ್ ಮೇರೀಸ್ ದ್ವೀಪದಲ್ಲಿ ಉದ್ಘಾಟಿಸಿದರು.

 ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಸಿಆರ್‌ಝಡ್ ಕಾನೂನು ಹಾಗೂ ಪ್ರಾಚ್ಯವಸ್ತು ನಿರ್ದೇಶನಾಲಯದ ಮಾರ್ಗಸೂಚಿಯಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಆದರೆ ಇವುಗಳು ವಾಣಿಜ್ಯೀಕರಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಸಚಿವರು ನುಡಿದರು.

ಇದೀಗ ದ್ವೀಪದಲ್ಲಿ ಐಲೆಂಡ್ ಕಚೇರಿ, ವಿಶ್ರಾಂತಿ ತಾಣ, ಫುಡ್‌ಕೋರ್ಟ್, ಹಟ್ಸ್ ಮತ್ತು ಗಝೇಬೊ, ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ, ಲೈಫ್‌ಗಾರ್ಡ್ ಹಾಗೂ ಸುರಕ್ಷತಾ ಉಪಕರಣಗಳು, ಕುಳಿತುಕೊಳ್ಳಲು ಆಸನಗಳು, ಲಗ್ಗೇಜ್ ರೂಮ್, ಕರಕುಶಲ ಹಾಗೂ ಸವನೀರ್ ಶಾಪ್, ಮಾಹಿತಿ ಕೇಂದ್ರ, ವಯರ್‌ಲೆಸ್, ವೈಫೈ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ., ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ನರೋನ್ಹಾ, ಸದಸ್ಯರಾದ ರಮೇಶ್ ಕಾಂಚನ್, ಗಣೇಶ ನೇರ್ಗಿ, ಸತೀಶ್ ಅಮೀನ್ ಪಡುಕೆರೆ, ಬೀಚ್ ಅಭಿವೃದ್ಧಿ ವ್ಯವಸ್ಥಾಪಕ ಮಂತ್ರಾ ಟೂರಿಸಂನ ಸುದೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ನಗರಸಭೆಯ ಆಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News