ಪೋಪ್ ಮ್ಯಾನ್ಮಾರ್ ಭೇಟಿ ಮುಕ್ತಾಯ
ಯಾಂಗನ್ (ಮ್ಯಾನ್ಮಾರ್), ನ. 30: ಪೋಪ್ ಫ್ರಾನ್ಸಿಸ್ ಗುರುವಾರ ತನ್ನ ಮ್ಯಾನ್ಮಾರ್ ಭೇಟಿಯನ್ನು ಮುಕ್ತಾಯಗೊಳಿಸಿದರು. ಯುವಜನರಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಅವರು ನೆರೆಯ ಬಾಂಗ್ಲಾದೇಶಕ್ಕೆ ಪ್ರಯಾಣಿಸಿದರು.
ಪೋಪ್ ಭೇಟಿಯು ಜಗತ್ತಿನ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟಾಗಿರುವ ರೊಹಿಂಗ್ಯಾ ಸಾಮೂಹಿಕ ವಲಸೆಯತ್ತ ಜಗತ್ತಿನ ಗಮನವನ್ನು ಸೆಳೆದಿದೆಯಾದರೂ, ಈವರೆಗೆ ಪೋಪ್ ಈ ವಿಷಯದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿಲ್ಲ.
ಪೋಪ್‌ರ ಮೌನವನ್ನು ಸಮರ್ಥಿಸಿಕೊಂಡಿರುವ ವ್ಯಾಟಿಕನ್, ಬೌದ್ಧ ಬಾಹುಳ್ಯದ ದೇಶದೊಂದಿಗೆ ‘ಸೇತುವೆ ನಿರ್ಮಿಸಲು’ ಪೋಪ್ ಬಯಸಿದ್ದಾರೆ ಎಂದಿದೆ.
ಆದರೆ, ಮಾನವಹಕ್ಕು ಗುಂಪುಗಳು ಮತ್ತು ಸ್ವತಃ ರೊಹಿಂಗ್ಯಾ ನಿರಾಶ್ರಿತರು, ಜನಾಂಗೀಯ ನಿರ್ಮೂಲನೆ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ಪೋಪ್ ಹಿಂಜರಿದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ನಡೆಸಿದ ದೌರ್ಜನ್ಯಕ್ಕೆ ಬೆದರಿ ಆಗಸ್ಟ್ 25ರಿಂದ ಸುಮಾರು 6.20 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಪೋಪ್ ಈಗಾಗಲೇ ರೊಹಿಂಗ್ಯಾ ನಿರಾಶ್ರಿತರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ತನ್ನ ಮ್ಯಾನ್ಮಾರ್ ಭೇಟಿಯ ವೇಳೆ, ಅಲ್ಲಿನ ಸರಕಾರದೊಂದಿಗೆ ರೊಹಿಂಗ್ಯಾ ನಿರಾಶ್ರಿತರ ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಮ್ಯಾನ್ಮಾರ್‌ನ ಸ್ಥಳೀಯ ಕೆಥೋಲಿಕ್ ಚರ್ಚ್ ನೀಡಿದ ಸಲಹೆಯನ್ನು ಪೋಪ್ ಫ್ರಾನ್ಸಿಸ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ವ್ಯಾಟಿಕನ್ ವಕ್ತಾರ ಗ್ರೆಗ್ ಬುರ್ಕ್ ಹೇಳಿದ್ದಾರೆ.
ಮ್ಯಾನ್ಮಾರ್ ಪ್ರವಾಸದ ವೇಳೆ ಎಚ್ಚರಿಕೆಯಿಂದ ಇರಬೇಕು ಹಾಗೂ ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಮಾತನಾಡುವಾಗ ‘ರೊಹಿಂಗ್ಯಾ’ ಪದವನ್ನು ಬಳಸಬಾರದು ಎಂಬುದಾಗಿ ಕೆಥೋಲಿಕ್ ಚರ್ಚ್ ಹೇಳಿತ್ತು.
‘‘ಪೋಪ್ ಏನು ಹೇಳಿದರು ಅಥವಾ ಏನು ಹೇಳಲಿಲ್ಲ ಎಂಬ ಬಗ್ಗೆ ನೀವು ಅವರನ್ನು ಟೀಕಿಸುವಂತಿಲ್ಲ. ಈ ವಿಷಯದಲ್ಲಿ ಅವರು ತನ್ನ ನೈತಿಕ ಅಧಿಕಾರವನ್ನು ಕಳೆದುಕೊಳ್ಳುವುದಿಲ್ಲ’’ ಎಂದು ವಕ್ತಾರರು ಹೇಳಿದರು.