ಟ್ರಂಪ್ ಟ್ವಿಟರ್ ಖಾತೆಯನ್ನು 11 ನಿಮಿಷ ಮುಚ್ಚಿದ್ದು ಯಾರು ಗೊತ್ತಾ?
ಸ್ಯಾನ್‌ಫ್ರಾನ್ಸಿಸ್ಕೊ, ನ. 30: ತನ್ನ ಕೆಲಸದ ಕೊನೆಯ ದಿನದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವಿಟರ್ ಖಾತೆಯನ್ನು 11 ನಿಮಿಷಗಳ ಕಾಲ ಮುಚ್ಚಿಸಿರುವುದು ತಾನು ಎಂಬುದಾಗಿ ಟ್ವಿಟರ್ ಇಂಕ್‌ನ ಮಾಜಿ ಉದ್ಯೋಗಿ ಹಾಗೂ ಜರ್ಮನ್ ಪ್ರಜೆ ಬಹ್ತಿಯಾರ್ ಡಯ್‌ಸಕ್ ಹೇಳಿದ್ದಾರೆ.
ಬಹ್ತಿಯಾರ್ ಜೊತೆಗಿನ ಸಂದರ್ಶನವೊಂದನ್ನು ತಂತ್ರಜ್ಞಾನ ಸುದ್ದಿ ವೆಬ್‌ಸೈಟ್ ‘ಟೆಕ್‌ಕ್ರಂಚ್’ ಬುಧವಾರ ಪ್ರಕಟಿಸಿದೆ. ಟರ್ಕಿ ಮೂಲದ ಅವರು ಹುಟ್ಟಿದ್ದು ಮತ್ತು ಬೆಳೆದದ್ದು ಜರ್ಮನಿಯಲ್ಲಿ ಎಂದು ವೆಬ್‌ಸೈಟ್ ಹೇಳಿದೆ.
ಟ್ರಂಪ್‌ರ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿದ ವ್ಯಕ್ತಿಯ ಗುರುತು ಈವರೆಗೆ ಬಹಿರಂಗವಾಗಿರಲಿಲ್ಲ.
‘‘ಟ್ರಂಪ್‌ರನ್ನು ತಾತ್ಕಾಲಿಕವಾಗಿ ಮೌನವಾಗಿಸಲು ನಾನು ಹಾಗೆ ಮಾಡಿದ್ದೆ. ಆದರೆ, ಅದು ನಾನು ಮಾಡಿದ ತಪ್ಪು. ಅದರಿಂದ ಅವರ ಖಾತೆ ಮುಚ್ಚುತ್ತದೆ ಎಂದು ನಾನು ಯೋಚಿಸಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಅದು ಯೋಜಿತ ಕೃತ್ಯವಾಗಿರಲಿಲ್ಲ. ನನ್ನ ಕೊನೆಯ ಪಾಳಿಯ ಅಂತ್ಯದ ಹೊತ್ತಿಗೆ ಟ್ರಂಪ್ ಖಾತೆಯನ್ನು ಮುಚ್ಚುವ ಅವಕಾಶವೊಂದು ತಾನಾಗಿಯೇ ಒದಗಿ ಬಂತು. ಅದನ್ನು ಬಳಸಿಕೊಳ್ಳಲು ನಿರ್ಧರಿಸಿದೆ’’ ಎಂದರು.
ಟ್ರಂಪ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಕಾಶ ಸಿಕ್ಕಿದರೆ ಅದನ್ನು ಬಳಸಿಕೊಳ್ಳಲು ಲಕ್ಷಾಂತರ ಜನರು ಸಿದ್ಧರಿದ್ದಾರೆ ಎಂದು ಹೇಳಿದ ಅವರು, ‘‘ನನ್ನ ಮಟ್ಟಿಗೆ ಅದೊಂದು ಆಕಸ್ಮಿಕವಾಗಿತ್ತು’’ ಎಂದರು.