ಕ್ರೌಡ್ ಫಂಡಿಂಗ್ ಮೂಲಕ ವಿದ್ಯಾರ್ಥಿಗಳಿಂದ ಸಿನೆಮಾ ನಿರ್ಮಾಣ
ಉಡುಪಿ, ನ.30: ಮಣಿಪಾಲದ ವಿದ್ಯಾರ್ಥಿಗಳು, ಪದವೀಧರರು ಹಾಗೂ ವೃತ್ತಿಪರರು ಸೇರಿಕೊಂಡು ಸ್ಥಾಪಿಸಿರುವ ‘ಚಿಕನ್ ಸಾಂಬಾರ್’ ಎಂಬ ನಿರ್ಮಾಣ ಸಂಸ್ಥೆಯು ವಾಣಿಜ್ಯೀಕರಣದ ಪ್ರಭಾವದಿಂದ ಭಿನ್ನವಾಗಿರಲು ಸಾರ್ವಜನಿಕರಿಂದ ನಿಧಿ(ಕ್ರೌಡ್ ಫಂಡಿಂಗ್) ಸಂಗ್ರಹಿಸಿ ಸಿನೆಮಾ ತಯಾರಿಸಲು ಮುಂದಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನೆಮಾದ ನಿರ್ದೇಶಕ ರಾಹುಲ್ ಮೆನನ್, ‘ಫಿಕ್ಷನ್’ ಹೆಸರಿನ ಈ ಚಲನಚಿತ್ರವನ್ನು ಸಾರ್ವ ಜನಿಕರಿಂದ ಸಂಗ್ರಹಿಸಿದ ಆರು ಲಕ್ಷ ರೂ. ಬಜೆಟ್‌ನಲ್ಲಿ ತಯಾರಿಸಲಾಗುವುದು. ತಂಡವು ವೆಚ್ಚವನ್ನು ಕಡಿಮೆಗೊಳಿಸಿ ಸಂಗ್ರಹವಾದ ಮೊತ್ತದಲ್ಲಿಯೇ ಚಿತ್ರೀಕರಣ ನಡೆಸುವ ಭರವಸೆಯಲ್ಲಿದೆ ಎಂದರು.
ಒಂದು ಮೊಟ್ಟೆ ಕಥೆಯ ಖ್ಯಾತಿಯ ರಾಜ್ ಶೆಟ್ಟಿ ಈ ಚಿತ್ರದಲ್ಲಿ ಪ್ರೀತಿ ಮತ್ತು ವಿಮೋಚನೆಯ ಹುಡುಕಾಟ ನಡೆಸುವ ‘ಗಾಂಧಿ’ ಪಾತ್ರವನ್ನು ನಿರ್ವಹಿಸಲಿರುವರು. ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಈ ಸಿನೆಮಾವು ಮೂರು ಕಥೆಗಳ ಒಗ್ಗೂಡುವಿಕೆಯಾಗಿದೆ ಎಂದು ಅವರು ಹೇಳಿದರು.
ಒಂದೂವರೆ ಗಂಟೆಯ ಅವಧಿ ಸಿನೆಮಾ ಇದಾಗಿದ್ದು, ಇದರ ಚಿತ್ರೀಕರಣವು ಮಲ್ಪೆ, ಮಣಿಪಾಲ, ಉಡುಪಿ, ಮಂಗಳೂರು ಸುತ್ತಮುತ್ತ ನಡೆಯಲಿದೆ. ಈಗಾಗಲೇ ಚಿತ್ರೀಕರಣ ಆರಂಭಗೊಂಡಿದ್ದು, ಒಂದು ವರ್ಷದಲ್ಲಿ ಸಿನೆಮಾ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಚಿಕನ್ ಸಾಂಬಾರ್ ಸಂಸ್ಥೆಯು ಈಗಾಗಲೇ ಏಳು ಕಿರುಚಿತ್ರಗಳನ್ನು ಮತ್ತು ನಾಲ್ಕು ಸಂಗೀತ ವಿಡೀಯೋವನ್ನು ನಿರ್ಮಿಸಿದೆ. ಈ ತಂಡದ ಮೊದಲ ಕಿರುಚಿತ್ರ 'ಫೆಯ್’ ಎನ್‌ಡಿಟಿವಿ ಪ್ರೈಮ್ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದೆ. ಹ್ಯಾಪಿನೆಸ್ ಕಿರುಚಿತ್ರಕ್ಕೆ ಯೆಸ್ ಬ್ಯಾಂಕ್ ನಡೆಸಿದ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರನಟ ರಾಜ್ ಶೆಟ್ಟಿ, ನಿರ್ಮಾಪಕಿ ನಿಶ್ಮಿತಾ ಬಿ., ಫಿಕ್ಷನ್ ಸಿನೆಮಾದ ನಟ ಅಂಶ್ ಸೇಥಿ, ರವಿರಾಜ್ ಉಪಸ್ಥಿತರಿದ್ದರು.