ಜಿಲ್ಲೆ, ತಾಲೂಕುಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಯಾಗಲಿ: ಹರ್ಷೇಂದ್ರ ಕುಮಾರ್
ಮೂಡುಬಿದಿರೆ, (ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ), ನ.30: ರಾಜ್ಯದ ಪ್ರತೀ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಣ್ಣಿನ ಅಂಶ ತಿಳಿಯಲು ಸಹಕಾರಿಯಾಗಬಲ್ಲ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಯಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆ ಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆಯಲ್ಲಿ ನಡೆದ 3 ದಿನಗಳ ಆಳ್ವಾಸ್ ಕೃಷಿ ಸಿರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ಬಗ್ಗೆ ತಿಳಿದುಕೊಳ್ಳಲು ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆಯಿಂದ ಕೃಷಿಕರಿಗೆ ಮತ್ತು ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.
ಇದಕ್ಕೂ ಮುನ್ನ ಶಾಸಕ ಅಭಯಚಂದ್ರ ಜೈನ್ ತೆಂಗಿನ ಗರಿ ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಕೃಷಿ ಸಿರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಂದಿನ ಕೃಷಿ ಪದ್ಧತಿಗೂ ಈಗಿನ ಕೃಷಿ ಪದ್ಧತಿಗೂ ಅಜಗಜಾಂತರ ವ್ಯತ್ಯಾಸಗಳಿವೆ.ಆಗ ಅಕ್ಕಿ ಮುಡಿಗೆ 1 ರು.ಇತ್ತು.ಅದನ್ನು ಮಾರಿದರೂ ದುಡ್ಡಿಲ್ಲ ಎನ್ನುವ ಕಷ್ಟದ ಪರಿಸ್ಥಿತಿ.ನಮ್ಮ ಪೂರ್ವಜರು ಕೃಷಿ ಬದುಕಿನಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಇಂದು ಹೋರಾಟದ ಫಲವಾಗಿ ಕೃಷಿಕರು ಗೌರವದಿಂದ ಬದುಕುವಂತಾಗಿದೆ ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ , ಬೆಂಗಳೂರು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್ ಪ್ರಕಾಶ್ ಕಮ್ಮರಗಿ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ವೇಣುಗೋಪಾಲ್, ಮಂಗಳೂರು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಆನಂದ, ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕರ್ನಾಟಕ ರಾಜ್ಯ ರೈತ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ಧನಕೀರ್ತಿ ಬಲಿಪ, ಎಸ್‌ಕೆಡಿಆರ್‌ಡಿಪಿ ಕಾರ್ಕಳ ವಲಯ ಇದರ ಯೋಜನಾಧಿಕಾರಿ ಕೃಷ್ಣಯ್ಯ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ನುಡಿಸಿರಿಯ ರೂವಾರಿ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು.
ಎಪಿಎಂಸಿ ಕಾಯ್ದೆಗೆ ಶೀಘ್ರ ತಿದ್ದುಪಡಿ: ಪ್ರಕಾಶ್ ಕಮ್ಮರಡಿ
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕಿಸುವ ನಿಟ್ಟಿನಲ್ಲಿ ಬೆಂಬಲ ಬೆಲೆಗೆ ಶಾಸನಬದ್ಧ ಸ್ವರೂಪ ನೀಡಲಾಗುವುದು. ಅದಕ್ಕಾಗಿ ಶೀಘ್ರದಲ್ಲೇ ಕರ್ನಾಟಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್.ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಈಗ ಬೆಂಬಲ ಬೆಲೆಗೆ ಯಾವುದೇ ಕಾನೂನು ಚೌಕಟ್ಟುಗಳಿಲ್ಲ.
ಉದಾಹರಣೆಗೆ, ಭತ್ತಕ್ಕೆ ಸರ್ಕಾರ 15 ರೂ. ಬೆಂಬಲ ಬೆಲೆ ಘೋಷಿಸಿದ್ದರೂ ಅದಕ್ಕಿಂತ ಕಡಿಮೆ ಬೆಲೆಗೆ ರೈತರಿಂದ ಖರೀದಿಸುತ್ತಿದ್ದಾರೆ. ಎಪಿಎಂಸಿ ವ್ಯಾಪ್ತಿಯೊಳಗೇ ಈ ರೀತಿ ರೈತರಿಗೆ ವಂಚನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕೃಷಿ ಬೆಲೆ ಆಯೋಗವು ಸರ್ಕಾರಕ್ಕೆ ತನ್ನ ಮಹತ್ವದ ವರದಿ ಸಲ್ಲಿಸಲಿದ್ದು, ಅದರಲ್ಲಿ ಈ ಎಲ್ಲ ಶಿಫಾರಸುಗಳು ಇರಲಿವೆ ಎಂದು ತಿಳಿಸಿದರು.
ಕಾಯ್ದೆಗೆ ತಿದ್ದುಪಡಿಯಾದರೆ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವಂತಿಲ್ಲ. ಹಾಗೆ ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದವರು ವಿವರಿಸಿದರು.
ಕೃಷಿ ಸಿರಿ ವೈವಿಧ್ಯತೆ
ಆಳ್ವಾಸ್ ನುಡಿಸಿರಿಯುದ್ದಕ್ಕೂ ಕೃಷಿ ಸಿರಿ ಹಲವು ವೈವಿಧ್ಯತೆಗಳೊಂದಿಗೆ ಜನರಿಗೆ ತೆರೆದುಕೊಳ್ಳಲಿದೆ. 10ಕ್ಕೂ ಮಿಕ್ಕಿ ವಿದೇಶಿ ಪಕ್ಷಿಗಳ ಪ್ರದರ್ಶನ,5ಕ್ಕೂ ಅಧಿಕ ಬೋನ್ಸಾಯಿ ಕೃಷಿ ಪ್ರದರ್ಶನ,ಪುಷ್ಪ ಪ್ರದರ್ಶನ,ನ್ಯೂಜಿಲ್ಯಾಂಡ್ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣದ ಸಸ್ಯಗಳ ಪ್ರದರ್ಶನ,ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿಗಳ ಪ್ರದರ್ಶನ,4 ತಳಿಗಳ ಬಿದಿರು ಗಿಡಗಳು ಮತ್ತು 4 ತಳಿಗಳ ಬಿದಿರು ಪ್ರದರ್ಶನ,ಕೃಷಿ ಸಂಬಂಧಿ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, 2 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಸುಧಾರಿತ ಮತ್ತು ಊರಿನ ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದ ನೈಜ ಕೃಷಿ ದರ್ಶನ,ಕೃಷಿ ಆವರಣದ ವೇದಿಕೆಯಲ್ಲಿ ನಿರಂತರ ತಡರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, 20ಕ್ಕೂ ರಾಜ್ಯ ಮಟ್ಟದ ಕೃಷಿ ಮಳಿಗೆಗಳು ಜನರನ್ನು ಆಕರ್ಷಿಸಲಿವೆ.