×
Ad

ಪುತ್ತೂರು : ನಂದಿದ ಅಮರ್ ಜವಾನ್ ಜ್ಯೋತಿ

Update: 2017-11-30 22:10 IST

ಪುತ್ತೂರು,ನ.30 : ದೇಶಕ್ಕಾಗಿ ಬಲಿದಾನಗೈದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪುತ್ತೂರಿನ ಮಿನಿ ವಿಧಾನಸೌಧದ ಎದುರು ಖಾಸಗಿ ಒಡೆತನದಲ್ಲಿ ನಿರ್ಮಿಸಲಾದ ರಾಷ್ಟ್ರೀಯ `ಅಮರ್ ಜವಾನ್ ಜ್ಯೋತಿ' ಯೋಧ ಸ್ಮಾರಕದಲ್ಲಿ ಉರಿಯುತ್ತಿದ್ದ ಜ್ಯೋತಿ ಗುರುವಾರ ತಾಂತ್ರಿಕ ಕಾರಣದಿಂದಾಗಿ ನಂದಿ ಹೋಗಿದೆ.

ಕಳೆದ ಸ್ವಾತಂತ್ರ್ಯಾ ದಿನಾಚರಣೆಯಂದು ಈ ಯೋಧ ಸ್ಮಾರಕ ಲೋಕಾರ್ಪಣೆಯಾಗಿತ್ತು. ದೇಶ ಪ್ರೇಮದ ಸಂಕೇತವಾಗಿ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ಮುಖಂಡರು ನಿರ್ಮಿಸಿದ್ದ ಈ ಯೋಧ ಸ್ಮಾರಕದ ಮೇಲೆ 'ಮುಗುಳಿ' ಇಟ್ಟು ರಾಷ್ಟ್ರಕಲಶದ ಪ್ರತಿಷ್ಠಾಪನೆ ಮಾಡಿ ಜ್ಯೋತಿ ಬೆಳಗಲಾಗಿತ್ತು.  ನಿತ್ಯನಿರಂತರ ದೀಪ ಬೆಳಗುವ ಮೂಲಕ ದೇಶಕ್ಕಾಗಿ ಬಲಿದಾನಗೈದ ಸೈನಿಕರ ಹೆಸರನ್ನು ಶಾಶ್ವತವಾಗಿ ನೆನಪಿಸುವ ಸಲುವಾಗಿ ಅಂದು ಉರಿಸಿದ ಅಮರ್ ಜವಾನ್ ಜ್ಯೋತಿ ಗುರುವಾರ ನಂದಿ ಹೋಗಿದೆ. ಸದಾ ಜ್ಯೋತಿ ಉರಿಯಲು ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಜೋಡಣೆಯಲ್ಲಿನ ತಾಂತ್ರಿಕ ದೋಷವೇ ದೀಪ ನಂದಿ ಹೋಗಲು ಕಾರಣ ಎಂದು ಹೇಳಲಾಗುತ್ತಿದೆ.

ಮೊದಲ ಮಹಾಯುದ್ಧದಲ್ಲಿ ಮಡಿದ 80 ಸಾವಿರ ಸೈನಿಕರ ನೆನಪಿಗಾಗಿ ಬ್ರಿಟೀಷರು ಇಂಡಿಯಾ ಗೇಟ್ ಬಳಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಅದರಲ್ಲಿ 30 ಸಾವಿರ ಮಂದಿ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಇದರ ಪಕ್ಕದಲ್ಲಿಯೇ ನಂತರ 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗೋಸ್ಕರ ಇಂದಿರಾ ಗಾಂಧಿ ಅವರು `ಅಮರ್ ಜವಾನ್ ಜ್ಯೋತಿ' ಸ್ಮಾರಕವನ್ನು ನಿರ್ಮಿಸಿ 1972 ರಲ್ಲಿ ಲೋಕಾರ್ಪಣೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News