ಉಡುಪಿ : ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಕೆ: ಡಾ.ರೋಹಿಣಿ
ಉಡುಪಿ, ನ.30: ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, 2017ರಲ್ಲಿ ಸಾಮಾನ್ಯ ಸೋಂಕಿತರ ಸಂಖ್ಯೆ ಶೇ.0.57 ಮತ್ತು ಸೋಂಕಿತ ಗರ್ಭಿಣಿಯರ ಸಂಖ್ಯೆ ಶೇ.0.05ಕ್ಕೆ ಇಳಿಕೆಯಾಗಿದೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ರೋಹಿಣಿ ಈ ಬಗ್ಗೆ ಮಾಹಿತಿ ನೀಡಿದರು.
2017-18(ಅಕ್ಟೋಬರ್ ತಿಂಗಳವರೆಗೆ)ನೆ ಸಾಲಿನಲ್ಲಿ ಜಿಲ್ಲೆಯ 33998 ಸಾಮಾನ್ಯ ಮಂದಿಯನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸುವ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 27913 ಮಂದಿಯನ್ನು ಪರೀಕ್ಷಿಸಿ ಶೇ.82ರಷ್ಟು ಸಾಧನೆ ಮಾಡಲಾಗಿದೆ. ಪರೀಕ್ಷೆಗೆ ಒಳಪಡಿಸಿದವರಲ್ಲಿ 160 ಮಂದಿ ಎಚ್‌ಐವಿ ಸೋಂಕಿತರೆಂದು ಕಂಡುಬಂದಿದೆ. ಅದೇ ರೀತಿ 18375 ಮಂದಿ ಗಭಿರ್ಣಿ ಯರನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಿದ್ದು ಅದರಲ್ಲಿ 12902 ಮಂದಿಯನ್ನು ಪರೀಕ್ಷಿಸಿದ್ದು, ಅವರಲ್ಲಿ ಆರು ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ.
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಹಾಗೂ ಉಡುಪಿ ಎಆರ್‌ಟಿ ಕೇಂದ್ರದಲ್ಲಿ ಎಚ್‌ಐವಿ ಸೋಂಕಿತ ಒಟ್ಟು 1573, 18ವರ್ಷಕ್ಕಿಂತ ಮೇಲ್ಪಟ್ಟ ಪುರುಷರು, 1785 ಮಹಿಳೆಯರು, 111 ಗಂಡು ಮಕ್ಕಳು, 91 ಹೆಣ್ಣು ಮಕ್ಕಳು, 9 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 3569 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಡ್ಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ 13 ಐಸಿಟಿಸಿ ಕೇಂದ್ರಗಳಿದ್ದು, ಎಚ್‌ಐವಿ ಸೋಕಿಂತ ಗರ್ಭಿಣಿಯರಿಂದ ಶಿಶುವಿಗೆ ಸೋಂಕು ಹರಡದಂತೆ ಹೆರಿಗೆಗೆ ಮುಂಚೆ ಎಆರ್‌ಟಿ ಹಾಗೂ ಹೆರಿಗೆ ನಂತರ ಹುಟ್ಟಿದ ಮಗುವಿಗೆ ನೆವಿರಾಪಿನ್ ದ್ರಾವಣ ನೀಡಲಾಗುತ್ತದೆ. ಅರ್ಹ ಸೋಂಕಿತರಿಗೆ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಮತ್ತು ಸಾಮಾನ್ಯ ಜೀವನ ನಡೆಸಲು ಎಆರ್‌ಟಿ ಚಿಕಿತ್ಸೆಯನ್ನು ಉಡುಪಿ ಮತ್ತು ಕುಂದಾಪುರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವಿದ್ದು, ಇದರಿಂದ ರೋಗ ನಿಯಂತ್ರಣ ಸಾಧ್ಯವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುವಲ್ಲಿ ಜಿಲ್ಲೆಯ ಐಸಿಟಿಸಿ ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕಕ್ಕೆ ಭೇಟಿ ನೀಡಬಹುದಾಗಿದೆ. ಅಲ್ಲದೆ 1097ಕ್ಕೆ ಕರೆಮಾಡಿ ಉಚಿತವಾಗಿಯೂ ಮಾಹಿತಿ ಪಡೆಯಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಹಾಜರಿದ್ದರು.