ಬಂಟ್ವಾಳ : ಮಾಜಿ ಸೈನಿಕರೊಂದಿಗೆ ಸಂವಾದ ಕಾರ್ಯಕ್ರಮ
ಬಂಟ್ವಾಳ, ನ. 30: ಸೈನ್ಯಕ್ಕೆ ಸೇರಬೇಕಾದರೆ ಆತ್ಮಸ್ಥೈರ್ಯ, ಛಲ, ಕಠಿಣ ಪ್ರಯತ್ನ ನಿರಂತರ ಶ್ರಮ ಅಗತ್ಯ ಎಂದು ಭಾರತೀಯ ಭೂಸೇನೆಯ ಮಾಜಿ ಜೂನಿಯರ್ ಕಮಿಷಂಡ್ ಆಫೀಸರ್ ಕಾಂತಪ್ಪಗೌಡ ಮಡಂತ್ಯಾರು ಹೇಳಿದ್ದಾರೆ.
ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿಯಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ 'ಸೈನಿಕರೊಂದಿಗೆ ಸಂವಾದ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅರ್ಪಣಾ ಭಾವದಿಂದ ತೊಡಗಿಸಿಕೊಳ್ಳುವುದರ ಮೂಲಕ ದೇಶ ಸೇವೆ ಮಾಡಿದ ತೃಪ್ತಿ ಸೈನಿಕರಿಗೆ ದೊರೆಯುತ್ತದೆ. ಭಾರತೀಯ ಸೈನ್ಯಕ್ಕೆ ನೇಮಕಗೊಳ್ಳಲು ಬೇಕಾದ ಅಗತ್ಯತೆಗಳು, ನೇಮಕಾತಿ ಪ್ರಕ್ರಿಯೆ ಅವಕಾಶಗಳು, ಅನಭವಗಳು ಹಾಗೂ ನಿವೃತ್ತಿ ಜೀವನದ ನಂತರ ದೊರೆಯುವ ಸಾಮಾಜಿಕ ಗೌರವ, ಉದ್ಯೋಗಾವಕಾಶಗಳು ಇವುಗಳ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ಭೂಸೇನೆಯ ಮಾಜಿ ಜೂನಿಯರ್ ಕಮಿಷಂಡ್ ಆಫೀಸರ್ ಉಮೇಶ್ ಕುಲಾಲ್ ಹಾಗೂ ದಿನೇಶ್ ಮೂಲ್ಯ ಅವರು ಸಂವಾದದಲ್ಲಿ ಪಾಲ್ಗೊಂಡರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ರೋನಾಲ್ಡ್ ಪ್ರವೀಣ್ ಕೊರೆಯ ಮತ್ತು ಡಾ. ಮೇರಿ ಎಂ. ಜೆ. ಉಪಸ್ಥಿತರಿದ್ದರು.