ನಾಡುನುಡಿ ಹಬ್ಬ ‘ಆಳ್ವಾಸ್ ನುಡಿಸಿರಿ’ಗೆ ವೈಭವದ ಚಾಲನೆ

Update: 2017-12-01 09:29 GMT

# ವರ್ಣರಂಜಿತ ಮೆರವಣಿಗೆ 

ಮೂಡುಬಿದಿರೆ (ರತ್ನಾಕರ ವೇದಿಕೆ), ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣ, ಡಿ.1: ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಅಸ್ಮಿತೆ ಸೂಕ್ಷ್ಮಗೊಂಡಾಗ ಭಿನ್ನರಾಗಿರುವ ಅನ್ಯರು ಹೆಚ್ಚಾಗುತ್ತಾರೆ. ಇದು ಒಡಕಿಗೆ ಕಾರಣವಾಗುತ್ತದೆ ಎಂದು ಖ್ಯಾತ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಅಭಿಪ್ರಾಯಿಸಿದರು.

ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರ ವೇದಿಗೆ ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 3 ದಿನಗಳ ಕಾಲ ನಡೆಯುವ 14ನೆ ವರ್ಷದ ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಪ್ರಾಪ್ತಿಗಾಗಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವಿನ ತಾಕಲಾಟ ಈ ಅನ್ಯರ ಸೃಷ್ಟಿಗೂ ಕಾರಣವಾಗುತ್ತಿದೆ. ಬಹುಸಂಖ್ಯಾತರಿಗೆ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಭೀತಿಯಾದರೆ, ಅಲ್ಪಸಂಖ್ಯಾತರಿಗೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದ ನಡುವಿನ ಅಭದ್ರತೆಯು ಪರಸ್ಪರ ವಿರುದ್ಧವಾಗಿ ಎದುರು ಬೀಳಲು ಕಾರಣವಾಗುತ್ತಿದೆ ಎಂದು ಡಾ. ರಾಮಚಂದ್ರನ್ ತಾರ್ಕಿಕವಾಗಿ ನುಡಿದರು.

ನಮ್ಮ ಅಸ್ಮಿತೆಯ ನೆಲೆಗಟ್ಟೇ ನಮಗಿಂತ ಭಿನ್ನರಾಗಿರುವವರನ್ನು ಅನ್ಯರನ್ನಾಗಿಸುವುದು. ಅನನ್ಯತೆ ಹೆಚ್ಚು ಗಟ್ಟಿಯಾದಂತೆ ಅನ್ಯರೂ ಹೆಚ್ಚಾಗುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸಾಮಾಜಿಕ- ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ಬಗೆಯ ಅಸ್ಮಿತೆಗಳಿರುತ್ತವೆ. ಧರ್ಮ, ಪಂಥ, ಭಾಷೆ, ಸಂಸ್ಕೃತಿ, ಜನಾಂಗ, ರಾಷ್ಟ್ರ ಮೊದಲಾದ ಸಂದರ್ಭದಲ್ಲಿ ಅನ್ಯರನ್ನು ಮಾನ್ಯ ಮಾಡುವವರೇ ಮತ್ತೊಂದು ನೆಲೆಯಲ್ಲಿ ಅನ್ಯರನ್ನು ದೂರವಿಡುತ್ತಾರೆ. ಧಾರ್ಮಿಕ ನೆಲೆಯಲ್ಲಿ ಅನ್ಯರೆಂದು ಕಾಣದಿದ್ದರೂ ಆಹಾರದ ನೆಲೆಯಲ್ಲಿ, ಭಾಷೆಯ ನೆಲೆಯಲ್ಲಿ ಇನ್ನೊಬ್ಬರು ಅನ್ಯರಾದಾಗ ಅವರು ಭಿನ್ನರಾಗುತ್ತಾರೆ. ಈ ಭಿನ್ನತೆಯು ಅನ್ಯರನ್ನು ಶತ್ರುಗಳನ್ನಾಗಿಸುತ್ತದೆ ಎಂದು ಡಾ. ರಾಮಚಂದ್ರನ್ ವಿಶ್ಲೇಷಿಸಿದರು.

ಈ ಅನ್ಯರ ಕಳವಳ ಇಂದು ನಿನ್ನೆಯದಲ್ಲ. ದೇಶ ವಿಭಜನೆಯ ನಂತರದ ಭಾರತದ ಮೊದಲ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ವೌಲಾನಾ ಅಬುಲ್ ಕಲಮ್ ಆಝಾದ್‌ರವರಿಂದ ಇದು ಆರಂಭಗೊಂಡಿತ್ತು. ಇದು ಮುಂದುವರಿದು ಎಂ.ಎಫ್. ಹುಸೇನ್‌ರವರ ಹಿಂದೂ ದೇವತೆಗಳ ಚಿತ್ರಗಳು, ಮಾಸ್ತಿಯವರ ಎರಡು ಕಾದಂಬರಿಗಳು, ಕೇರಳದಲ್ಲಿ ದಿ ಲಾಸ್ಟ್ ಟೆಮ್ಟೇಶನ್ ಎಂಬ ನಾಟಕ, ಚಂದ್ರಮೋಹನ್ ಶ್ರೀಮಂತುಲ ಎಂಬ ಗುಜರಾತಿನ ಶಿಲ್ಪಕಲೆಯ ವಿದ್ಯಾರ್ಥಿ ರಚಿಸಿದ ದೇವಗಳ ಮೂರ್ತಿಗಳು, ಪೆರಮಾಳ್ ಮುರುಗನ್ ರಚಿಸಿದ ಕಾದಂಬರಿ, ಶಿವರಾಮ ಕಾರಂತರ ಓದುವ ಆಟ ಎಂಬ ಪಠ್ಯ ಪುಸ್ತಕ, ನಾಗವೇಣಿ ಅವರ ಗಾಂಧಿ ಬಂದ ಎಂಬ ಕಾದಂಬರಿ, ಪ್ರಸ್ತುತ ಸುದ್ದಿಯಲ್ಲಿರುವ ಪದ್ಮಾವತಿ ಚಲನಚಿತ್ರ ಮೊದಲಾದ ಕೃತಿಗಳು, ಚಿತ್ರಗಳು ಎದುರಿಸಿದ ತೀವ್ರ ಪ್ರತಿಭಟನೆಗಳನ್ನು ಗಮನಿಸಿದಾಗ ಅಸ್ಮಿತೆಯಿಂದ ಉದ್ಭವವಾಗುವ ಅಸಹನೆ ಮುಗಿಯದ ಕತೆ ಎಂಬುದು ಸಾಬೀತಾಗುತ್ತದೆ ಎಂದು ಡಾ.ರಾಮಚಂದ್ರನ್ ಹೇಳಿದರು.

ಭಾರತದ ಸಂವಿಧಾನ ಈ ಅಸ್ಮಿತೆ, ಅನ್ಯತೆಯನ್ನು ಒಗ್ಗೂಡಿಸುತ್ತದೆ. ಬಹುತ್ವವನ್ನು ಒಪ್ಪಿಕೊಂಡಿರುವ ರಾಜಕೀಯ- ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವರ ಹಕ್ಕುಗಳನ್ನು ಮೊಟಕುಗೊಳಿಸುವುದು ಹಾಗೂ ಕೆಲವರಿಗೆ ವಿಶೇಷ ಹಕ್ಕನ್ನು ನೀಡುವುದು ಅನಿವಾರ್ಯ ಎಂಬ ಸಿದ್ಧಾಂತವನ್ನು ಕಾರ್ಯಗತಗೊಳಿಸುತ್ತದೆ. ಬಹುಧರ್ಮೀಯ, ಬಹು ಸಾಂಸ್ಕೃತಿಕ ಬಹು ಭಾಷಿಕ ವ್ಯವಸ್ಥೆಯಲ್ಲಿ ಎಲ್ಲರೂ ಸಹಬಾಳ್ವೆ ನಡೆಸಬೇಕಾದರೆ, ವೈಚಾರಿಕ- ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ಈ ಎಲ್ಲಾ ನೆಲೆಗಳಲ್ಲೂ ದ್ವಿಮಾನ ವೈರುಧ್ಯಗಳನ್ನು ತಿರಸ್ಕಿರಿಸಿ ಸಂವಿಧಾನದ ನೆಲೆಯಲ್ಲಿ ಮುಂದುವರಿಯಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಸಮಾನತೆ, ಏಕತೆ, ಮಾನವೀಯತೆ ದೇಶದ ಸಾಹಿತ್ಯದ ಬುನಾದಿ. ಅದಕ್ಕೆ ಧಕ್ಕೆ ಬಂದಾಗ ಇಂತಹ ಸಮ್ಮೇಳನಗಳು ಪುನರುಜ್ಜೀವನ ನೀಡುವಂತಹ ಕೆಲಸ ಮಾಡಬೇಕು ಎಂದರು.

ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಜಯಶ್ರೀ ಅಮರನಾಥ ಶೆಟ್ಟಿ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಐಕಳ ಹರೀಶ್ ಶೆಟ್ಟಿ, ವಂ. ಗೋಮ್ಸ್ ಉಪಸ್ಥಿತರಿದ್ದರು.

ರಥದ ಮೇಲಿನ ವ್ಯಾಸ ಪೀಠದಲ್ಲಿದ್ದ ಗ್ರಂಥವನ್ನು ತೆರೆಯುವ ಹಾಗೂ ಭತ್ತದ ತೆನೆಗೆ ಹಾಲೆರೆಯುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ 14ನೆ ವರ್ಷದ ಆಳ್ವಾಸ್ ನುಡಿಸಿರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.

ಇದೇ ವೇಳೆ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಡಾ. ಎಂ.ಮೋಹನ್ ಆಳ್ವ ಸನ್ಮಾನಿಸಿದರು. ಉದ್ಘಾಟನಾ ಸಮಾರಂಭಕ್ಕೂ ಮೊದಲು ಸಮ್ಮೇಳನಾಧ್ಯಕ್ಷರು ಹಾಗೂ ಗಣ್ಯರನ್ನು ಒಳಗೊಂಡಂತೆ ವರ್ಣರಂಜಿತ ಮೆರವಣಿಗೆ ವಿದ್ಯಾಗಿರಿಯ ಪ್ರವೇಶದ್ವಾರದಿಂದ ಸಮ್ಮೇಶನದ ವೇದಿಕೆಯವರೆಗೂ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ 2016ರ ನೆನಪಿನ ಸಂಚಿಕೆಯನ್ನುಅನಾವರಣಗೊಳಿಸಲಾಯಿತು.

ಮಾಧ್ಯಮ, ರಾಜಕೀಯ ಪಕ್ಷಗಳ ವಿರುದ್ಧ ಡಾ. ಮೋಹನ್ ಆಳ್ವ ಅಸಮಾಧಾನ

 ಪ್ರಾಸ್ತಾವಿಕವಾಗಿ ಮಾತನಾಡಿದ ನುಡಿಸಿರಿ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಸಮಾಜವನ್ನು ಕಟ್ಟುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ. ಸತ್ಯನಿಷ್ಟವಾದ ವರದಿಗಾರಿಕೆಯಲ್ಲಿ ಮಾಧ್ಯಮಗಳು ತಮ್ಮತನವನ್ನು ಕಳೆದುಕೊಳ್ಳುತ್ತಿವೆ ಎಂದು ಬೇಸರಿಸಿದರು.

ರಾಜಕೀಯ ಪಕ್ಷಗಳು ಓಟಿಗಾಗಿ ಸಮಾಜವನ್ನು ಒಡೆದು ಕಂದಕವನ್ನು ಸೃಷ್ಟಿಸುತ್ತಿವೆ. ಯಾವ ರಾಜಕೀಯ ಪಕ್ಷದಲ್ಲೂ ಗೌರವ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ನೈಜತೆಯನ್ನು ಸಮಾಜದ ಮುಂದಿಡಬೇಕಾದ ಮಾಧ್ಯಮಗಲು ಮಾಜದ ನ್ಯಾಯಾಧೀಶರಂತೆ ವರ್ತಿಸುತ್ತಿವೆ. ಸಾಮಾಜಿಕ ಜಾಲತಾಣಗಳು ವರದಿಗಾರಿಕೆ ಕೆಲಸವನ್ನು ಮಾಡುತ್ತಿವೆ. ಈ ರೀತಿಯಲ್ಲಿ ಸಮಾಜ ವಿಭಜನೆ ಆಗುತ್ತಿರುವಾಗ ಇದನ್ನು ಒಂದು ಮಾಡುವಲ್ಲಿ ಸಾಂಸ್ಕೃತಿಕ, ಕಲೆಯನ್ನು ಒಳಗೊಂಡ ಸಾಹಿತ್ಯಿಕ ಸಮ್ಮೇಳನಗಳ ಅಗತ್ಯವಿದೆ ಎಂದು ಡಾ. ಮೋಹನ್ ಆಳ್ವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News