ಬಹುತ್ವವನ್ನು ನಿರಾಕರಿಸಿದರೆ ಬದುಕನ್ನು ನಿರಾಕರಿಸಿದಂತೆ: ಡಾ.ನಾಗತಿಹಳ್ಳಿ

Update: 2017-12-01 10:11 GMT

ಮೂಡುಬಿದಿರೆ (ರತ್ನಾಕರವರ್ಣಿ ವೇದಿಕೆ), ಡಿ.1: ಬಹುತ್ವ ಜಗತ್ತಿನ ಶಕ್ತಿ ಮೂಲ. ಬಹುತ್ವನ್ನು ನಿರಾಕರಿಸಿದರೆ ಬದುಕನ್ನು ನಿರಾಕರಿಸಿದಂತೆ ಎಂದು ಆಳ್ವಾಸ್ ನುಡಿಸಿರಿ- 2017ರ ಸಮ್ಮೇಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ ವ್ಯಕ್ತಪಡಿಸಿದರು.

ಇಂದು ಮೂಡುಬಿದಿರೆ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ನುಡಿಸಿರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಬಹುತ್ವವೆಂಬ ಶಕ್ತಿಮೂಲವನ್ನು ಛಿದ್ರಗೊಳಿಸಬಾರದು. ಧ್ರುವೀಕರಣದಿಂದಾಗುವ ಅಪಾಯ ನಮ್ಮ ಬಹುತ್ವದ ಶಕ್ತಿ ಮೂಲವನ್ನು ನಾಶ ಮಾಡುತ್ತದೆ ಎಂದು ಎಚ್ಚರಿಸಿದರು.

ಬಹುತ್ವದ ನಿರಾಕರಣೆಗೆ ಒಳಗಾದ ಸಮಾಜ ಘಾಸಿಗೊಳ್ಳುತ್ತದೆ ಮತ್ತು ಗಾಯಗೊಳ್ಳುತ್ತದೆ. ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪುಗಳು ಉಂಟು ಮಾಡಬಲ್ಲ ಇಂತಹ ಗಾಯಗಳು ಸಮಾಜವನ್ನು ಶತಮಾನಗಳವರೆಗೆ ನೋಯಿಸುತ್ತವೆ ಎಂದು ಡಾ.ನಾಗತಿಹಳ್ಳಿ ಹೇಳಿದರು.

ಅಸಮಾನತೆಯ ಅಸ್ತ್ರ, ಶೋಷಣೆಯ ಪ್ರತೀಕವಾಗಿ ಜಾತಿ ಬಳಕೆಯಾಗುತ್ತಿದೆ. ಅಪ್ಪನ ಹೆಸರನ್ನು ಕೇಳಿ ಪಕ್ಕದಲ್ಲಿ ಕುಳಿತವನ ಜಾತಿಯನ್ನು ತಿಳಿದುಕೊಳ್ಳುವ ವಿಚಿತ್ರ ವಿರೋಧಾಭಾಸದ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಮನಸ್ಸು ಧ್ರುವೀಕರಣಗೊಂಡಿದೆ. ಈ ಧ್ರುವೀಕರಣವೇ ಬಹುತ್ವದ ಶಕ್ತಿಮೂಲವನ್ನು ನಾಶ ಮಾಡುವ ಅಪಾಯವಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ನಮ್ಮ ರಾಷ್ಟ್ರಗೀತೆ ಮತ್ತು ನಾಡಗೀತೆಗಳು ಬಹುತ್ವದ ದೊಡ್ಡ ಮಾದರಿ ಎಂದು ಬಣ್ಣಿಸಿದ ಅವರು, ಬಹುತ್ವದ ಸೌಂದರ್ಯವನ್ನು ಇದಕ್ಕಿಂತಲೂ ಚೆನ್ನಾಗಿ ವರ್ಣಿಸುವುದು ಕಷ್ಟದ ಕೆಲಸ. ಈ ಎರಡೂ ಕಾವ್ಯಗಳ ಮೂಲ ಉದ್ದೇಶ ಈ ನೆಲದ ಬಹುತ್ವದ ಸೌಂದರ್ಯವನ್ನು ಘನತೆಯಿಂದ ಎತ್ತಿ ಹಿಡಿಯುವುದಾಗಿದೆ ಎಂದರು.

ಕನ್ನಡದ ನೆಲದಲ್ಲಿ ನಡೆದ ವಚನ ಚಳವಳಿಯಲ್ಲಿ ಬಹುತ್ವದ ವಿರಾಟ್ ಸ್ವರೂಪ ಪ್ರಕಟವಾಗಿದೆ. ಅಲ್ಲಿ ಗೋಚರಿಸುವ ಅಸಂಖ್ಯವಾದ ವಚನದನಿಗಳು ಬಹುತ್ವದ ನಿಜವಾದ ಪ್ರತಿರೂಪಗಳು. ಜನಪದರು ವೌಖಿಕವಾಗಿಯೇ ಅದನ್ನು ಕಟ್ಟಿಕೊಂಡು ಬಂದಿದ್ದರು ಎಂದು ಡಾ.ನಾಗತಿಹಳ್ಳಿ ವಿಶ್ಲೇಷಿಸಿದರು.

ಲಂಡನ್ ನಗರದಲ್ಲಿ ಪಾಕಿಸ್ತಾನಿ ಸಂಜಾತ ಸಾದಿಕ್ ಖಾನ್ ಮೇಯರ್ ಹುದ್ದೆಗೇರಿರುವುದು, ಅಮೆರಿಕದ ಪ್ರಸಿದ್ಧ ಉದ್ದಿಮೆಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಲ್ಲಿ ಭಾರತೀಯರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿರುವುದು ಬಹುತ್ವಕ್ಕೆ ಅತ್ಯುತ್ತಮ ಉದಾಹರಣೆಗಳು. ಮಾರಿಷಸ್, ಕಿನ್ಯಾದಲ್ಲಿ ಉದ್ಯಮ ಮತ್ತು ರಾಜಕಾರಣದಲ್ಲಿ ಭಾರತೀಯರು ಮುಂಚೂಣಿಯಲ್ಲಿರುವುದು ಇದಕ್ಕೆ ಇನ್ನೊಂದು ಸೇರ್ಪಡೆ ಎಂದರು.

ಧಾರ್ಮಿಕವಾಗಿ ಏಕ ಜಾತಿಯ ನೆಡುತೋಪಿನಂತಹ ಸಮಾಜವನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಅದರ ಮೂಲ ಉದ್ದೇಶವೇ ಬಹುತ್ವದ ನಾಶ ಮಾಡುವುದು. ಯಾವ ಮಣ್ಣಿನಲ್ಲಿ ಬೀಜ ನೆಟ್ಟರೂ ಬೆಳೆದು ಫಲ ಕೊಡುವ ಉದಾರಿ ಸ್ವಭಾವದ ಗಿಡ, ಮರಗಳು ಮನುಷ್ಯರಿಗೆ ಮಾದರಿ ಆಗಬೇಕು. ಆ ಮೂಲಕ ಏಕ ಜಾತಿಯ ನೆಡುತೋಪು ಸೃಷ್ಟಿಸುವ ಹುನ್ನಾರವನ್ನು ವಿಫಲಗೊಳಿಸಬೇಕು ಎಂದು ಅವರು ಹೇಳಿದರು.

ಒಬ್ಬ ರಾಷ್ಟ್ರೀಯ ನಾಯಕನನ್ನು ಮೆಚ್ಚಿಸಲು ಇನ್ನೊಬ್ಬನ ಚಾರಿತ್ರಹರಣ ಸರಿಯಲ್ಲ

ಒಬ್ಬ ರಾಷ್ಟ್ರೀಯ ನಾಯಕನನ್ನು ಮೆಚ್ಚಿಸಲು ಇನ್ನೊಬ್ಬ ನಾಯಕನನ್ನು ಖಂಡಿಸುವುದು, ಚಾರಿತ್ರ್ಯ ಹರಣ ಮಾಡುವುದು ಸರಿಯಲ್ಲ. ಒಪ್ಪಿಕೊಂಡಾಗ ಎಲ್ಲರೂ ಇನ್ನುಳಿದ ರಾಷ್ಟ್ರೀಯ ನಾಯಕರನ್ನು ಖಂಡಿಸಬೇಕು, ಚಾರಿತ್ರ್ಯಹನನ ಮಾಡಿಬೇಕು ಎಂದು ಕೆಲವರು ಬಯಸುತ್ತಾರೆ. ರಾಷ್ಟ್ರೀಯ ನಾಯಕರನ್ನು ಒಪ್ಪಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News