ಚೊಚ್ಚಲ ಪಂದ್ಯದಲ್ಲೇ ಹಿಟ್‌ವಿಕೆಟ್ ಆದ ಮೊದಲ ಕ್ರಿಕೆಟಿಗ ಸುನೀಲ್ ಅಂಬ್ರಿಸ್
ವೆಲ್ಲಿಂಗ್ಟನ್, ಡಿ.1: ವೇಗದ ಬೌಲರ್ ನೀಲ್ ವಾಗ್ನರ್ ದಾಳಿಗೆ ದಿಕ್ಕೆಟ್ಟ ವೆಸ್ಟ್‌ಇಂಡೀಸ್ ತಂಡ ಶುಕ್ರವಾರ ಇಲ್ಲಿ ಆರಂಭವಾದ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 134 ರನ್‌ಗಳಿಗೆ ಆಲೌಟಾಯಿತು.
ವಾಗ್ನೆರ್ 39 ರನ್‌ಗೆ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪ್ರವಾಸಿ ವಿಂಡೀಸ್ ತಂಡಕ್ಕೆ ಸಿಂಹಸ್ವಪ್ನರಾದರು. ಚೊಚ್ಚಲ ಪಂದ್ಯವಾಡಿದ ಸುನೀಲ್ ಅಂಬ್ರಿಸ್ ಹಿಟ್‌ವಿಕೆಟ್‌ಗೆ ಔಟಾಗಿ ಕಳಪೆ ದಾಖಲೆ ನಿರ್ಮಿಸಿದರು.
ಶೈ ಹೋಪ್ ವಿಕೆಟ್ ಪತನಗೊಂಡಾಗ ಕ್ರೀಸ್‌ಗೆ ಇಳಿದ ಸುನೀಲ್ ಅವರು ವಾಗ್ನೆರ್ ಬೌಲಿಂಗ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಹಿಟ್‌ವಿಕೆಟ್‌ಗೆ ಒಳಗಾದರು. ಬಲಗೈ ಬ್ಯಾಟ್ಸ್‌ಮನ್ ಸುನೀಲ್ ಅವರು ವಾಗ್ನೆರ್ ಎಸೆತವನ್ನು ಎದುರಿಸುವಾಗ ಕ್ರೀಸ್‌ನಲ್ಲಿ ಸ್ವಲ್ಪ ಹಿಂದಕ್ಕೆ ಸರಿದರು. ಆಗ ಅವರ ಕಾಲು ಬೈಲ್ಸ್‌ಗೆ ತಾಗಿತು. ಹಿಟ್‌ವಿಕೆಟ್‌ನಿಂದ ಔಟಾದರು.
ಸುನೀಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ ಹಿಟ್‌ವಿಕೆಟ್‌ಗೆ ಒಳಗಾಗಿ ಶೂನ್ಯಕ್ಕೆ ಔಟಾದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಸುನೀಲ್ 14 ವರ್ಷಗಳ ಬಳಿಕ ಹಿಟ್‌ವಿಕೆಟ್‌ನಲ್ಲಿ ಔಟಾದ ಮೊದಲ ಟೆಸ್ಟ್ ಕ್ರಿಕೆಟಿಗನಾಗಿದ್ದಾರೆ. ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್‌ವಾ 2003ರಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಹಿಟ್‌ವಿಕೆಟ್‌ಗೆ ಒಳಗಾಗಿದ್ದರು.
ವಿಂಡೀಸ್‌ನ ಪರ ಆರಂಭಿಕ ದಾಂಡಿಗ ಪೊವೆಲ್ 42 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಬ್ರಾತ್‌ವೇಟ್(24),ಡೌರಿಚ್(18) ಹಾಗೂ ರೋಚ್(ಅಜೇಯ 14) ಎರಡಂಕೆ ಸ್ಕೋರ್ ದಾಖಲಿಸಿದರು.