×
Ad

ಪರ್ಯಾಯದ ಯೋಜಿತ ಹೆಚ್ಚಿನ ಕಾರ್ಯ ಪೂರ್ಣ: ಪೇಜಾವರಶ್ರೀ

Update: 2017-12-01 17:58 IST

ಉಡುಪಿ, ಡಿ.1: ದಾಖಲೆಯ ಐದನೇ ಪರ್ಯಾಯದ ವೇಳೆ ತಾವು ಯೋಜಿಸಿದ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ಹೆಚ್ಚಿನ ಕಾರ್ಯಗಳು ಪೂರ್ಣ ಗೊಂಡಿದ್ದು, ಇತರೆ ಕೆಲವು ಯೋಜನೆಗಳು ಬಾಕಿ ಉಳಿದಿವೆ. ಇವುಗಳನ್ನು ಪರ್ಯಾಯ ಪೀಠದಿಂದ ಇಳಿದ ಬಳಿಕ ಪೂರ್ಣಗೊಳಿಸಲಾಗುವುದು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ಬಡಗುಮಳಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಆರ್ಥಿಕ ಸಂಪನ್ಮೂಲಗಳನ್ನು ನೋಡಿಕೊಂಡು ಶ್ರೀಕೃಷ್ಣ ಮಠದ ರಾಜಾಂಗಣದ ಮೇಲಿನ ಮಧ್ವಾಂಗಣ ಪ್ರಾಂಗಣ, ಎರಡು ಛತ್ರಗಳು, ಶ್ರೀಕೃಷ್ಣ ಮಠದ ಸುತ್ತುಪೌಳಿ ಕಾರ್ಯ ಪೂರ್ಣಗೊಂಡಿವೆ. ಇವಲ್ಲದೇ ಧರ್ಮಸಂಸದ್, ಸಂಸ್ಕೃತ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಇನ್ನು ಕೆಲವು ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆ, ಪಾಜಕದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಶಾಲೆ-ಕಾಲೇಜು ಕಾಮಗಾರಿ ಪ್ರಗತಿಯಲ್ಲಿದೆ. ಇವುಗಳನ್ನು ಮುಂದೆ ಪೂರ್ಣಗೊಳಿಸಲಾಗುವುದು ಎಂದರು.

ರಾಜಾಂಗಣದ ಮೇಲ್ಭಾಗದಲ್ಲಿ ನಡೆದಿರುವ ಮಧ್ವಾಂಗಣದ ಕಾಮಗಾರಿ ಇನ್ನೊಂದು ವಾರದೊಳಗೆ ಪೂರ್ಣಗೊಳ್ಳಲಿದೆ. ಇದರ ಉದ್ಘಾಟನೆಗೆ ಹಲವರನ್ನು ಆಹ್ವಾನಿಸಲಾಗಿದೆ. ಯಾರ ದಿನಾಂಕ ಸಿಗುವುದೋ ನೋಡಬೇಕು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅನಂತಕುಮಾರ್ ಮುಂತಾದವರು ಆಹ್ವಾನಿಸಲಾಗಿದೆ ಎಂದು ಪೇಜಾವರಶ್ರೀ ನುಡಿದರು.

ತಮ್ಮ ಹಿಂದಿನ ಪರ್ಯಾಯದ ವೇಳೆ ರಾಜಾಂಗಣವನ್ನು ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಉದ್ಘಾಟಿಸಿರುವುದರಿಂದ, ಮಧ್ವಾಂಗಣದ ಉದ್ಘಾಟನೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಲಾಗಿದೆ. ಅವರ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರು.

ಸನ್ಯಾಸ ಸ್ವೀಕರಿಸಿ 80 ವರ್ಷಗಳನ್ನು ಪೂರ್ಣಗೊಳಿಸಿರುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಭಗವಂತ ಆಯುಷ್ಯ ನೀಡಿರುವುದರಿಂದ ಇದು ಸಾದ್ಯವಾಗಿದೆ. ಹೀಗಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ. ಆಳ್ವಾಸ್ ನುಡಿಶ್ರೀ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿರಾಕರಿಸಿರುವ ಬಗ್ಗೆ ಉತ್ತರಿಸಲು ಅವರು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News