8 ಇಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

Update: 2017-12-01 14:53 GMT

 ಹೊಸದಿಲ್ಲಿ, ಡಿ.1: 1,500 ಕೋಟಿ ರೂ. ಮೊತ್ತದ ಗೋಮತಿ ನದಿತೀರ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಎಂಟು ಇಂಜಿನಿಯರ್‌ಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

 ಮಾಜಿ ಮುಖ್ಯ ಇಂಜಿನಿಯರ್‌ಗಳಾದ ಗುಲೇಶ್ ಚಂದ್ರ, ಎಸ್.ಎನ್.ಶರ್ಮ ಮತ್ತು ಖಾಸಿಮ್ ಆಲಿ, ಮಾಜಿ ಸೂಪರಿಂಟೆಂಡಿಂಗ್ ಇಂಜಿನಿಯರ್‌ಗಳಾದ ಶಿವಮಂಗಲ್ ಯಾದವ್, ಅಖಿಲ್ ರಾಮನ್, ಕಮಲೇಶ್ವರ್ ಸಿಂಗ್, ರೂಪ್‌ಸಿಂಗ್ ಯಾದವ್ ಮತ್ತು ಎಕ್ಸಿಕ್ಯೂಟಿವ್ ಇಂಜಿಯರ್ ಸುರೇಂದ್ರ ಯಾದವ್ ವಿರುದ್ಧ ಮೊಕದ್ದಮೆ ದಾಖಲಾಗಿರುವುದಾಗಿ ಸಿಬಿಐ ಅಧಿಕಾರಿ ತಿಳಿಸಿದ್ದಾರೆ.

  ಉತ್ತರಪ್ರದೇಶದ ಗೋಮತಿ ನದಿಯ ಎರಡೂ ದಡದಲ್ಲಿ ನಾಲೆಯೊಂದನ್ನು ನಿರ್ಮಿಸಿ ನದಿ ನೀರನ್ನು ಬಳಕೆ ಮಾಡಿಕೊಳ್ಳುವ 1,500 ಕೋಟಿ ರೂ. ಮೊತ್ತದ ಯೋಜನೆಗೆ 2016ರಲ್ಲಿ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚಾಲನೆ ನೀಡಿದ್ದರು. ಆದರೆ ಈ ಯೋಜನೆಯ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಮತ್ತು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಲೋಕ್ ಸಿಂಗ್ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಲಾಗಿದ್ದು , ಅವ್ಯವಹಾರ ನಡೆದಿರುವುದನ್ನು ನ್ಯಾಯಮೂರ್ತಿ ದೃಢಪಡಿಸಿದ್ದರು. ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಉತ್ತರ ಪ್ರದೇಶದ ಸರಕಾರದ ಕೋರಿಕೆಯಂತೆ, ನ.24ರಂದು ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News