ಎಚ್‌ಐವಿ ಸೋಂಕಿತರ ಆತ್ಮವಿಶ್ವಾಸ ವೃದ್ಧಿಗೆ ಪ್ರಯತ್ನ: ಸೊರಕೆ
ಉದ್ಯಾವರ, ಡಿ.1: ರಾಜ್ಯ ಸರಕಾರ ಏಡ್ಸ್/ಎಚ್‌ಐವಿ ಸೋಂಕಿತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಈ ಮೂಲಕ ಅವರ ಆತ್ಮವಿಶ್ವಾಸ ವೃದ್ಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಾಪು ಶಾಸಕ ವಿಯ ಕುಮಾರ್ ಸೊರಕೆ ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ ಹಾಗೂ ಎನ್ನೆಸ್ಸೆಸ್ ಘಟಕ ಉದ್ಯಾವರ, ನಾಗರಿಕ ಸಹಾಯವಾಣಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವುಗಳ ಸಹಯೋಗದಲ್ಲಿ ‘ಆರೋಗ್ಯ ಎಲ್ಲರ ಹಕ್ಕು-ನನ್ನ ಆರೋಗ್ಯ ನನ್ನ ಹಕ್ಕು’ ಘೋಷಣೆಯಡಿ ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ವಿಶ್ವ ಏಡ್ಸ್ ದಿನಾಚರಣೆ’ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎಚ್‌ಐವಿ ಪೀಡಿತರನ್ನು ಸಮಾಜ ವಕ್ರದೃಷ್ಟಿಯಿಂದ ನೋಡುವ ಕಾಲ ಕೆಲ ಸಮಯದ ಹಿಂದೆ ಇತ್ತು. ಆದರೆ ಈಗ ವ್ಯವಸ್ಥಿತ ಚಿಕಿತ್ಸೆ, ಮುಂಜಾಗ್ರತಾ ಕ್ರಮದಿಂದ ಏಡ್ಸ್/ಎಚ್‌ಐವಿ ಸೋಂಕು ತಡೆಯುವಲ್ಲಿ ರಾಜ್ಯ ಪರಿಣಾಮಕಾರಿ ಘಟ್ಟಕ್ಕೆ ತಲುಪಿದೆ. ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಎಚ್‌ಐವಿ ಯನ್ನು ಶೂನ್ಯಕ್ಕಿಳಿಸಲು ಶ್ರಮ ವಹಿಸಬೇಕಿದೆ ಎಂದು ಸೊರಕೆ ಹೇಳಿದರು.
ವಿಶ್ವ ಏಡ್ಸ್ ದಿನದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಪಂ ಅಧ್ಯಕ್ಷ ದಿನಕರ ಬಾಬು, ಸಮಾಜದ ಎಲ್ಲರ ಸಹಕಾರದಿಂದ ಸೋಂಕು ತಡೆ ಗಟ್ಟಲು ಸಾಧ್ಯವಿದೆ. ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಕಾಲೇಜಿನ ಡಾ. ಪ್ರಭಾಕರ ಉಪಾಧ್ಯಾಯ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಪ್ರಸ್ತಾವಿಕವಾಗಿ ಮಾತನಾಡಿದರೆ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಚಿದಾನಂದ ಸಂಜು ಎಸ್.ವಿ. ಸ್ವಾಗತಿಸಿದರು.