ಮಹಿಳೆಯಿಂದ ಹಣ ಪಡೆದು ಬೆದರಿಕೆ ಆರೋಪ: ಯುವಕನ ಬಂಧನ
ಪುತ್ತೂರು, ಡಿ. 1: ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ನಗದು ಪಡೆದು ಹಿಂದಿರುಗಿಸದೆ, ಇನ್ನೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ವಿಟ್ಲ ಮಂಗಿಲಪದವು ನಿವಾಸಿ ಸಂಶುದ್ದೀನ್ ಅಲಿಯಾಸ್ ಮಹಮ್ಮದ್ ದಸ್ತಗಿರ್ (19) ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಆರೋಪಿ ಸಂಶುದ್ದೀನ್ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಸಬೀನಾ ಅವರಿಂದ ಪದೇ ಪದೇ ಹಣ ವಸೂಲಿ ಮಾಡಿಕೊಂಡು ಸುಮಾರು 6 ಲಕ್ಷ ರೂ. ನಗದು ಹಣ ಪಡೆದುದ್ದಲ್ಲದೆ, ಇನ್ನೂ ಹೆಚ್ಚಿನ ಹಣ ನೀಡಬೇಕೆಂದು ಬೇಡಿಕೆ ಮುಂದಿಟ್ಟು ಪೋನ್‌ನಲ್ಲಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಸಬೀನಾ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯನ್ನು ಬಂಧಿಸಿ, 3.65 ಲಕ್ಷ ರೂ. ನಗದು ಮತ್ತು ಆಕ್ಟೀವಾ ಸ್ಕೂಟರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.