×
Ad

ಮೊಟ್ಟೆ ಬೆಲೆ ಗಗನಕ್ಕೆ: ಅಂಗನವಾಡಿ ನೌಕರರಿಂದ ಪ್ರತಿಭಟನೆ

Update: 2017-12-01 22:15 IST

ಭಟ್ಕಳ, ಡಿ. 1: ದಿನದಿಂದ ದಿನಕ್ಕೆ ಜನಸಾಮಾನ್ಯರ ಚಿಂತೆಗೆ ಕಾರಣವಾಗುತ್ತಿರುವ ಕೋಳಿಮೊಟ್ಟೆ ದರ ಏರಿಕೆಯ ಬಿಸಿ ಇದೀಗ ಅಂಗನವಾಡಿ ಕೇಂದ್ರ ಗಳನ್ನೂ ತಟ್ಟಿದೆ. ಮೊಟ್ಟೆ ದರದ ಏರಿಕೆಯಿಂದಾಗಿ ನಮಗೆ ಮೊಟ್ಟೆ ಖರೀದಿಸಲು ಕಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡಿರುವ ತಾಲೂಕಿನ ಅಂಗನವಾಡಿ ನೌಕರರು  ಪ್ರತಿಭಟನೆ ನಡೆಸಿ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಪ್ರವಾಸಿ ಮಂದಿರದ ಮುಂದಿನ ಆವರಣದಲ್ಲಿ ಸೇರಿದ ನೂರಾರು ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ಭಟ್ಕಳ ಸಿಡಿಪಿಒ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸರಕಾರ ಪ್ರತಿ ಮೊಟ್ಟೆಗೆ 5 ರೂ.  ನಿಗದಿ ಮಾಡಿದೆ. ಆದರೆ ಇಲ್ಲಿಯವರೆಗೆ ಅಂಗನವಾಡಿ ನೌಕರರು ಖರೀದಿಸಿದ ಮೊಟ್ಟೆಯ ಖರ್ಚಿನ ಹಣವನ್ನು ಕಾರ್ಯಕರ್ತೆಯರ ಖಾತೆಗೆ ಜಮೆ ಮಾಡಿಲ್ಲ. ಇದೂ ಸಾಲದೆಂಬಂತೆ ಮೊಟ್ಟೆಯ ದರ ಪ್ರತಿ ಮೊಟ್ಟೆಗೆ  7ಕ್ಕೆ ಜಿಗಿದಿದ್ದರೂ ಸರಕಾರ ರೂ.5ನ್ನು ದಾಟುತ್ತಿಲ್ಲ.

ಪರಿಸ್ಥಿತಿಯನ್ನು ನಿಭಾಯಿಸಲು ನಮಗೆ ಕಷ್ಟವಾಗುತ್ತಿದೆ. ನಮಗೆ ಮೊಟ್ಟೆ ಖರೀದಿ ನಿಲ್ಲಿಸದೇ ಬೇರೆ ದಾರಿಯೇ ಇಲ್ಲವಾಗಿದೆ. ಭಟ್ಕಳದಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗುತ್ತಿಲ್ಲ. ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಊಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯುತ್ ಸಂಪರ್ಕದ ಹೆಸರಿನಲ್ಲಿಯೂ ನೌಕರರನ್ನು ಶೋಷಿಸಲಾಗುತ್ತಿದೆ ಎಂದು ನೌಕರರು ಅಳಲನ್ನು ತೋಡಿಕೊಂಡರು.

ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ಇರದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. 2015ರಲ್ಲಿ ನಡೆದ ಅಂಗನವಾಡಿ ನೌಕರರ 11 ದಿನಗಳ ಮುಷ್ಕರರ ಅವಧಿಯ ಗೌರವ ಧನವನ್ನು ಸರಕಾರ ನೌಕರರ ಖಾತೆಗೆ ಕೂಡಲೇ ಜಮೆ ಮಾಡುವಂತೆಯೂ ನೌಕರರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಭಟ್ಕಳ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾವತಿ ನಾಯ್ಕ,  ಕಾರ್ಯದರ್ಶಿ ಸುಧಾ ಭಟ್, ಕವಿತಾ ನಾಯ್ಕ, ಪದ್ಮಾ ಹೊಸ್ಮನೆ, ಶಾಂತಿ ಮೊಗೇರ, ಜಯಲಕ್ಷ್ಮೀ, ಸುಧಾ ಬೆಳ್ನಿ ಮೊದಲಾದವರು ಉಪಸ್ಥಿತರಿದ್ದರು. ಭಟ್ಕಳ ಪ್ರಭಾರ ಸಿಡಿಪಿಒ ಸುಶೀಲಾ ಮೊಗೇರ ಮನವಿಯನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News