ಬಿಸಿಯೂಟ ಕೊಡದಿದ್ದರೆ ‘ತಟ್ಟೆ ಚಳವಳಿ’ನಡೆಸುವೆ: ಶಿಕ್ಷಕ ಎಚ್ಚರಿಕೆ
ಮಂಗಳೂರು, ಡಿ.2: ರಾಜ್ಯ ಸರಕಾರ ವಿಶೇಷ ಚೇತನ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ನಿಲ್ಲಿಸಿದೆ. ಇದರ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಈ ಮಕ್ಕಳಿಗೆ ಇಲ್ಲ. ಹಾಗಾಗಿ ಜನಪ್ರತಿನಿಧಿಗಳು ಅತಿ ಶೀಘ್ರ ಸರಕಾರದ ಮೇಲೆ ಒತ್ತಡ ಹಾಕಿ ಬಿಸಿಯೂಟ ಆರಂಭಿಸಬೇಕು. ಇಲ್ಲದಿದ್ದರೆ ತಾನು ‘ತಟ್ಟೆ ಚಳವಳಿ’ ನಡೆಸುವೆ ಎಂದು ವಿಕಲಚೇತನ ವಿದ್ಯಾರ್ಥಿಗಳ ಶಿಕ್ಷಕ ನಾರಾಯಣ ಶೇರಿಗಾರ ಎಚ್ಚರಿಸಿದರು.
ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿನಗರ ಮತ್ತು ವಿಕಲ ಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜಕಾರಣಿಗಳು ವಿಕಲಚೇತನರ ನೋವು-ನಲಿವು ಆಲಿಸಲು ಸಮಯ ಮೀಸಲಿಡಬೇಕು. ತರಾತುರಿಯಲ್ಲಿ ಆಗಮಿಸಿ ಸಭೆಯಿಂದ ಹೊರ ನಡೆಯುವ ಪರಿಪಾಠ ನಿಲ್ಲಿಸಬೇಕು. ವಿಕಲಚೇತನರ ಕಲ್ಯಾಣಕ್ಕೆ ಶ್ರಮಿಸಬೇಕು. ಸರಕಾರ ನಿಲ್ಲಿಸಿದ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಪುನರಾರಂಭಿಸ ಬೇಕು ಎಂದು ನಾರಾಯಣ ಶೇರಿಗಾರ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಸರಕಾರ ವಿಕಲಚೇತನ ಕಲ್ಯಾಣಕ್ಕೆ ಶ್ರಮಿಸಲಿದೆ. ವಿಕಲಚೇತನರ ಸೇವೆಗೈಯುವ ಜಿಲ್ಲೆಯ ಸಂಘ ಸಂಸ್ಥೆಗಳು ನಿರೀಕ್ಷೆಗೂ ಮೀರಿದ ಕೆಲಸ ಮಾಡುತ್ತಿದೆ. ಈ ಸಂಸ್ಥೆಯೊಂದಿಗೆ ಕೈ ಜೋಡಿಸಲು ಸರಕಾರ ಬದ್ಧವಾಗಿದೆ. ಬಿಸಿಯೂಟ ಪುನರಾರಂಭಿಸುವ ಸಲುವಾಗಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷ ಕಸ್ತೂರಿ ಪಂಜ, ಉದ್ಯಮಿಗಳಾದ ಎಂ. ಗಣೇಶ್ ಶೆಟ್ಟಿ, ಅಶೋಕ್ ಮೊಯ್ಲಿ, ಗಾಂಧಿನಗರ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸುಧಾಕರ ಶೆಟ್ಟಿ, ವಿಕಲ ಚೇತನರ ಕಲ್ಯಾಣಕ್ಕೆ ಶ್ರಮಿಸುವ ಸಂಘಟನೆಗಳ ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ಮುರಳೀಧರ ನಾಯಕ್, ಸರಕಾರಿ ಅಧಿಕಾರಿಗಳಾದ ದೀಪು ಎಚ್. ಎನ್., ಉಸ್ಮಾನ್ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಕಲಚೇತನ ಮಕ್ಕಳ ಶಿಕ್ಷಕರಾದ ನಾರಾಯಣ ಶೇರಿಗಾರ, ಹಂಸ ಕುಮಾರಿ, ಮೇರಿ ಲೂಸಿ, ಧನಂಜಯ ವರ್ಮ, ಸಂತೋಷ್ ಕುಮಾರ್ ಟಿ.ಡಿ., ಸಂಜಯ ಪ್ರಸಾದ್, ಶೈಲಾ ಪಿ.ಜಿ., ಹರಿಣಾಕ್ಷಿ, ಅನಿತಾ ಅರ್ಜುನ್ ರಾಡ್ರಿಗಸ್, ಅಧಿಕಾರಿಗಳಾದ ಕುಮಾರಿ, ಪ್ರವೀಣ್ ನಾಯ್ಕಿ,ಬಿ. ಮುತ್ತಪ್ಪ, ವಿಕಲಚೇತನ ವಿದ್ಯಾರ್ಥಿಗಳಾದ ಪ್ರಜ್ವಲ್, ಪ್ರಜ್ಞಾ ಸಿ., ಅಸ್ಲಿ ಎ.ಜೆ. ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಮಂಗಳೂರು ವಿವಿ ಕಾಲೇಜಿನಿಂದ ಪುರಭವನಕ್ಕೆ ಸಾಮಾಜಿಕ ಅರಿವಿಗಾಗಿ ಜಾಥಾ ನಡೆಸಲಾಯಿತು.