ಮಂಗಲ್ಪಾಡಿ: ತೋರಣ ಕಟ್ಟುವ ವಿಷಯದಲ್ಲಿ ಗುಂಪುಗಳ ನಡುವೆ ಘರ್ಷಣೆ
ಮಂಜೇಶ್ವರ, ಡಿ. 2: ಮಂಗಲ್ಪಾಡಿ ಪಂಚಾಯತ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ತೋರಣಗಳನ್ನು ಕಟ್ಟುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ ಮುಸ್ತಫಾ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸಂದಾನಕ್ಕೆ ಪಂಚಾಯತ್ ಸದಸ್ಯ ಬಿ.ಎಂ ಮುಸ್ತಫಾ ಶ್ರಮಿಸಿದ್ದರು. ಬಳಿಕ ಪೊಲೀಸ್ ಅಧಿಕಾರಿಗಳು ತಲುಪಿ ಸಂಧಾನಕ್ಕೆ ಶ್ರಮಿಸಿದರೂ ಗುಂಪು ಒಪ್ಪಿರಲಿಲ್ಲ, ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನಲೆಯಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದರು. ಈ ವೇಳೆ ಪಂಚಾಯತ್ ಸದಸ್ಯ ಮುಸ್ತಫಾ ಮೇಲೂ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯತ್ ಸದಸ್ಯ ಮುಸ್ತಫಾ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಉಪ್ಪಳ ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಮುಖರಾದ ಎ.ಕೆ.ಎಂ ಅಶ್ರಫ್ , ಗೋಲ್ಡನ್ ರಹಿಮಾನ್ ಸೇರಿದಂತೆ ಹಲವು ಮಂದಿ ಪಾಳ್ಗೊಂಡಿದ್ದರು.