ಡಿ. 3ರಂದು ಹುಣ್ಣಿಮೆ ‘ಸೂಪರ್ ಮೂನ್’
ಉಡುಪಿ, ಡಿ.2: ರವಿವಾರ ಸಂಜೆ ಆಗಸರದಲ್ಲಿ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದಿರ ‘ಸೂಪರ್’. ಈ ವರ್ಷದಲ್ಲಿ (2017) ಇಷ್ಟು ದೊಡ್ಡ ಹುಣ್ಣಿಮೆ ಚಂದಿರ ಇದುವರೆಗೆ ಕಂಡಿದ್ದಿಲ್ಲ.
ಎಲ್ಲಾ ಹುಣ್ಣಿಮೆಗಳಲ್ಲೂ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಚಿಕ್ಕದಾಗಿ ಕಂಡರೆ, ಕೆಲವೊಮ್ಮೆ ಸ್ವಲ್ಪದೊಡ್ಡದಾಗಿ ಕಾಣುತ್ತದೆ. ಚಿಕ್ಕದಾಗಿದ್ದಾಗ ಬೆಳದಿಂಗಳ ಪ್ರಭೆ ಕಡಿಮೆ. ಹಾಗೆಯೇ ದೊಡ್ಡಾಗಿದ್ದಾಗ ಭವ್ಯ ವಾದ ಬೆಳದಿಂಗಳು. ಇದಕ್ಕೆಲ್ಲ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುವ ಪಥ. ಅದು ವೃತ್ತಾಕಾರ ವಲ್ಲ. ದೀರ್ಘ ವೃತ್ತಾಕಾರ ಎಂದು ಅದನ್ನು ಕರೆಯಲಾಗುತ್ತದೆ. ಈ ದೀರ್ಘ ವೃತ್ತದಲ್ಲಿ ಒಮ್ಮೆ ಸಮೀಪ ದೂರ (ಪೆರಿಜೀ), ಅದೇ ರೀತಿ ಒಮ್ಮೆ ದೂರದ ದೂರ (ಅಪೋಜೀ) ಬರುವುದಿದೆ. ಚಂದ್ರ-ಭೂಮಿ ನಡುವಿನ ಸರಾಸರಿ ದೂರ 3,84,000 ಕಿ.ಮೀ. ಆದರೆ ಪೆರಿಜೀಗೆ ಬಂದಾಗ 3,56,000 ಕಿ.ಮೀ. ಹಾಗೆಯೇ ಅಪೋಜೀಗೆ ಬಂದಾಗ 4,06,000 ಕಿ.ಮೀ ದೂರವಿರುತ್ತದೆ.
ರವಿವಾರ ಹುಣ್ಣಿಮೆಯ ಚಂದ್ರ, ಭೂಮಿಯಿಂದ 3,57,492 ಕಿ.ಮೀ ದೂರದಲ್ಲಿದ್ದು, ಪೆರಿಜೀಗೆ ತೀರಾ ಸಮೀಪದಲ್ಲಿರುತ್ತದೆ. ಹೀಗಾಗಿ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 28 ಅಂಶ ಹೆಚ್ಚಿನ ಪ್ರಭೆಯಲ್ಲಿ ನಮಗೆ ಕಾಣಿಸಿಕೊಳ್ಳುತ್ತಾನೆ. ಚಂದ್ರನೇ ಚಂದ. ಚಂದ್ರನ ಬೆಳದಿಂಗಳು ಇನ್ನೂ ಚಂದ. ಚಂದ್ರೋದಯ ಮತ್ತೂ ಚಂದ
ಈ ಎಲ್ಲಾ ಚಂದಗಳನ್ನು ರವಿವಾರ ಸಂಜೆ ನೋಡಿ ಖುಷಿಪಡಿ ಎಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪೂರ್ಣಪ್ರಜ್ಞ ಅಮೆಚೂರು ಆಸ್ಟ್ರೋನೋಮರ್ಸ್ ಕ್ಲಬ್‌ನ ಸಂಚಾಲಕ ಡಾ.ಎ.ಪಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಪರ್ ಮೂನ್ ವೀಕ್ಷಣೆಗೆ ಅವಕಾಶ
ರವಿವಾರ ಆಕಾಶದಲ್ಲಿ ಕಂಡುಬರುವ ಅತ್ಯಾಕರ್ಷಕ ಸೂಪರ್ ಮೂನ್ ವೀಕ್ಷಿಸಲು ಪರ್ಕಳದ ಅಚ್ಚುತ ನಗರದ ನಿವಾಸಿ ಆರ್. ಮನೋಹರ್ ವಿಶೇಷ ವ್ಯವಸ್ಥೆ ಕಲ್ಪಿಸಲಿದ್ದಾರೆ.
ಅವರು ಆವಿಷ್ಕರಿಸಿದ ನೂತನವಾದ ಭಾರತ ಮತ್ತು ಅಮೇರಿಕಾ ದೇಶಗಳ ಪೇಟೆಂಟ್ ಪಡೆದ 3 ದೂರದರ್ಶಕಗಳ ಮೂಲಕ ಡಿ.3 ರಂದು ಸೂಪರ್ ಮೂನ್‌ನ್ನು ಆಸಕ್ತರಿಗೆ ವೀಕ್ಷಿಸಲು ಪರ್ಕಳ ಅರ್ಜುನ್ ಯುವಕ ಮಂಡಳದ ಮೈದಾನದಲ್ಲಿ ಸಂಜೆ 8ರಿಂದ 10:15ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಖಗೋಳದಲ್ಲಿ ಆಸಕ್ತಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಯಕ್ರಮದ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು (ಮೊ:9845690278) ತಿಳಿಸಿದ್ದಾರೆ.