×
Ad

ತನ್ನ ಕುಟುಂಬಕ್ಕೆ ಏನಾದರೂ ಸಂಭವಿಸಿದರೆ ಮಾಧ್ಯಮಗಳಿಗೆ ಮಾಹಿತಿ ನೀಡಲು ತಿಳಿಸಿದ್ದ ನ್ಯಾ.ಲೋಯಾ ಪುತ್ರ

Update: 2017-12-02 20:10 IST

ಹೊಸದಿಲ್ಲಿ,ಡಿ.2: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್.ಲೋಯಾ ಅವರ ಸಾವಿನ ಹಿಂದೆ ಒಳಸಂಚು ಅಡಗಿತ್ತು ಎಂಬ ಊಹಾಪೋಹಗಳ ನಡುವೆಯೇ, ಲೋಯಾ ಕುಟುಂಬವು ಒತ್ತಡದಲ್ಲಿತ್ತು ಮತ್ತು ತನಗೇನಾದರೂ ಸಂಭವಿಸಿದರೆ ಮಾಧ್ಯಮಗಳಿಗೆ ಅಥವಾ ನೆರವು ನೀಡುವ ಯಾರಿಗಾದರೂ ಮಾಹಿತಿ ನೀಡುವಂತೆ ಅವರ ಪುತ್ರ ಅನುಜ್ ತನ್ನ ಸ್ನೇಹಿತನಿಗೆ ತಿಳಿಸಿದ್ದ ಎನ್ನಲಾಗಿದೆ.

ನ.29ರಂದು ಆಂಗ್ಲ ನಿಯತಕಾಲಿಕವೊಂದರ ಜೊತೆ ಇ-ಮೇಲ್ ಸಂವಾದದಲ್ಲಿ ಅನುಜ್‌ನ ಸ್ನೇಹಿತ ಈ ವಿಷಯವನ್ನು ತಿಳಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸಿದ್ದ 2015, ಫೆ.18ರ ಪತ್ರದ ಪ್ರತಿಯನ್ನು ಅನುಜ್ ತನಗೆ ತೋರಿಸಿದ್ದ ಎಂದೂ ಈ ಸ್ನೇಹಿತ ನಿಯತಕಾಲಿಕಕ್ಕೆ ತಿಳಿಸಿದ್ದಾನೆ. ತನಗೆ ಅಥವಾ ತನ್ನ ಕುಟುಂಬ ಸದಸ್ಯರಿಗೆ ಏನಾದರೂ ಆದರೆ ಬಾಂಬೆ ಉಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಮತ್ತು ಸಂಚಿನಲ್ಲಿ ಶಾಮೀಲಾಗಿದ್ದ ಇತರರು ಹೊಣೆಯಾಗುತ್ತಾರೆ ಎಂದು ಅನುಜ್ ಪತ್ರದಲ್ಲಿ ಹೇಳಿದ್ದು, ನಿಯತಕಾಲಿಕವು ಕಳೆದ ತಿಂಗಳು ಈ ಪತ್ರವನ್ನು ಪ್ರಕಟಿಸಿತ್ತು.

ನ.4ರವರೆಗೂ ಅನುಜ್ ತನ್ನ ಸಂಪರ್ಕದಲ್ಲಿದ್ದ ಮತ್ತು ಅಲ್ಲಿಯವರೆಗೂ ತನ್ನ ತಂದೆಯ ಸಾವಿನ ಹಿಂದೆ ಸಂಚು ಇತ್ತು ಎಂಬ ಆತನ ನಿಲುವು ಬದಲಾಗಿರಲಿಲ್ಲ ಎಂದೂ ಸ್ನೇಹಿತ ತಿಳಿಸಿದ್ದಾನೆ.

 ಲೋಯಾರ ನಿಧನದ ಬಳಿಕ ತನ್ನ ನಿವಾಸಕ್ಕೆ ನ್ಯಾ.ಶಾ ಅವರ ಭೇಟಿಯ ಬಗ್ಗೆ ಮಾತನಾಡಿದಾಗ ಅನುಜ್ ತುಂಬ ಹೆದರಿಕೊಂಡಂತೆ ಕಂಡು ಬಂದಿದ್ದ. ಈ ಘಟನೆಯು ಆತನ ಮೇಲೆ ಎಷ್ಟೊಂದು ಗಾಢ ಪರಿಣಾಮ ಬೀರಿತ್ತೆಂದರೆ ಆತ ಇಂಜಿನಿಯರಿಂಗ್ ತೊರೆದು ಕಾನೂನು ವ್ಯಾಸಂಗ ಮಾಡುತ್ತಿದ್ದ ಎಂದಿರುವ ಸ್ನೇಹಿತ, ಅನುಜ್ ಸೇರಿದಂತೆ ನ್ಯಾ.ಲೋಯಾ ಕುಟುಂಬದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಏನಾಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಆತನ ಮೇಲೆ ಒತ್ತಡ ಹೇರಲಾಗಿದೆಯೇ ಅಥವಾ ಏನಾದರೂ ಆಗಿದೆಯೇ ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.

‘‘ನನ್ನ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವುದರಲ್ಲಿ ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಯಾವುದೇ ಶಂಕೆಯಿಲ್ಲ’’ ಎಂಬ ಒಕ್ಕಣೆಯ ಇ-ಮೇಲ್ ಅನುಜ್ ಲೋಯಾ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ನ.29ರಂದು ಸದ್ರಿ ನಿಯತಕಾಲಿಕಕ್ಕೆ ಬಂದಿತ್ತು. ಆದರೆ ಗುರುತು ಖಚಿತ ಪಡಿಸಿಕೊಳ್ಳಲು ಅದು ಕಳುಹಿಸಿದ್ದ ಮೇಲ್‌ಗಳಿಗೆ ಆ ವ್ಯಕ್ತಿ ಉತ್ತರಿಸಿಲ್ಲ. ನ್ಯಾ.ಲೋಯಾರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂಬ ಆಗ್ರಹಗಳ ನಡುವೆಯೇ ಈ ಹೊಸ ಪತ್ರ ಉದ್ಭವಗೊಂಡಿದೆ.

ಲೋಯಾರ ಸಾವಿನ ಸಂದರ್ಭ ನಡೆದ ಘಟನೆಗಳು ಮತ್ತು ತಮ್ಮ ಒಪ್ಪಿಗೆಯಿಲ್ಲದೆ ಮರಣೋತ್ತರ ಪರೀಕ್ಷೆ ನಡೆಸಿದ್ದನ್ನು ಬಂಧುಗಳು ಪ್ರಶ್ನಿಸಿದ್ದರು. ಅನುಕೂಲಕರ ತೀರ್ಪು ಹೊರಬಿದ್ದರೆ 100 ಕೋ.ರೂ.ಗಳ ಲಂಚವನ್ನು ನೀಡುವ ಕೊಡುಗೆಯನ್ನು ನ್ಯಾ.ಶಾ ತನ್ನ ಮುಂದಿಟ್ಟಿದ್ದರು ಎಂದು ನ್ಯಾ.ಲೋಯಾ ತಮಗೆ ತಿಳಿಸಿದ್ದಾಗಿ ಕುಟುಂಬವು ಆರೋಪಿಸಿತ್ತು.

ನ್ಯಾ.ಲೋಯಾ ಅವರು ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣವನ್ನು ವಹಿಸಿಕೊಂಡ ಆರು ತಿಂಗಳುಗಳ ಬಳಿಕ 2014,ಡಿ.1ರಂದು ನಿಧನರಾಗಿದ್ದು, ಹೃದಯಾಘಾತ ಅವರ ಸಾವಿಗೆ ಕಾರಣ ಎಂದು ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News