ಕ್ರೆಡೈ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2017-12-02 15:00 GMT

ಮಂಗಳೂರು, ಡಿ. 2: ಮಂಗಳೂರು ಕ್ರೆಡೈ ವತಿಯಿಂದ ನಿರ್ಮಾಣ ಕ್ಷೇತ್ರದ ಕಾರ್ಮಿಕರ ಮಕ್ಕಳ ಶಿಕ್ಷಣ ಮುಂದುವರಿಸಲು ಆಯ್ಕೆ ಮಾಡಲಾದ 21 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಜೆ.ಆರ್. ಲೋಬೊ ಅವರು ವಿತರಿಸಿದರು.

ಪ್ರಸಕ್ತ ರಿಯಲ್‌ಎಸ್ಟೇಟ್ ಹಾಗೂ ನಿರ್ಮಾಣ ಉದ್ಯಮ ಕ್ಷೇತ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಮಂಗಳೂರು ಘಟಕ ಶಾಲೆಗಳಿಗೆ ಕೊಠಡಿ ನಿರ್ಮಿಸುವ ಮೂಲಕ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶಾದ್ಯಂತ ಕ್ರೆಡೈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆ ಕೈಗೊಂಡಿದೆ. ಪ್ರಧಾನಿ ಮಂತ್ರಿಯ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಗರದಲ್ಲಿ ಆರಂಭಿಸುವ ಗುರಿ ಇದೆ.ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಸರಕಾರಿ ಶಾಲೆಗಳಿಗೆ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ.

ಪಂಜಿಮೊಗರು ಹಾಗೂ ಬಿಕರ್ನಕಟ್ಟೆಯ ಎರಡು ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮೆಹ್ತಾ ತಿಳಿಸಿದರು.

ಮನಪಾ ಮೇಯರ್ ಕವಿತಾ ಸನಿಲ್ ಶುಭ ಹಾರೈಸಿದರು. ಕ್ರೆಡೈ ರಾಜ್ಯ ಘಟಕದ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಮಂಗಳೂರು ಘಟಕದ ಉಪಾಧ್ಯಕ್ಷ ಸಿರಾಜ್ ಅಹಮ್ಮದ್, ಕಾರ್ಯದರ್ಶಿ ನವೀನ್ ಕಾರ್ಡೋಝ,ಜೊತೆ ಕಾರ್ಯದರ್ಶಿ ವಿನೋದ್ ಪಿಂಟೋ,ಖಜಾಂಜಿ ಡಾ.ಎರಲ್ ಪಿಂಟೋ,ಕ್ರೆಡೈ ಮಂಗಳೂರು ಘಟಕದ ವ್ಯವಸ್ಥಾಪಕ ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News