ಡಿ. 8: ಪ್ರಗತಿ ಸ್ಟಡಿ ಸೆಂಟರ್‌ನ ದಶಮಾನೋತ್ಸವ
ಪುತ್ತೂರು, ಡಿ. 2: ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನ ದಶಮಾನೋತ್ಸವ ‘ದಶಪ್ರಣತಿ’ ಕಾರ್ಯಕ್ರಮ ಡಿ. 8ರಂದು ಮಂಜಲ್ಪಡ್ಪು ಸುದಾನ ವಸತಿಯುತ ವಿದ್ಯಾಸಂಸ್ಥೆಗಳ ಮೈದಾನದಲ್ಲಿ ವಿವಿಧ ಸಾಂಸ್ಕೃತಿ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯುವುದು ಎಂದು ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ.ವಿ. ಗೋಕುಲ್‌ನಾಥ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿ ಕಾರ್ಯಕ್ರಮ ದಶಸಂಭ್ರಮಕ್ಕೆ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಅರ್ತಿಕಜೆ ಗಣಪತಿ ಭಟ್ ಅವರು ಅಂದು ಪೂರ್ವಾಹ್ನ 9.30ಕ್ಕೆ ಚಾಲನೆ ನೀಡುವರು. ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗದ ಡಯೆಟ್ ಹಿರಿಯ ಉಪನ್ಯಾಸಕ ಜಿ.ಎಸ್. ಶಶಿಧರ್, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್. ಕೆ. ರಾಮಚಂದ್ರ ಭಟ್, ಪುತ್ತೂರು ವಿವೇಕಾನಂದ ಕಾಲೇಜಿನ ಶೈಕ್ಷಣಿಕ ಪರಿವೀಕ್ಷಕ ಹಾಗೂ ತರಬೇತಿ ಸಂಯೋಜಕ ರಘುರಾಜ್ ಉಬರಡ್ಕ, ಚೆನ್ನೈ ಕೆ.ಜೆ. ಆಸ್ಪತ್ರೆಯ ಡಾ. ಕೆ. ಮೋಹನ್‌ದಾಸ್, ಚೆನ್ನೈ ಲೇಡಿ ಆಂಡಾಳ್ ಮೆಟ್ರಿಕ್ಯುಲೇಶನ್ ಸ್ಕೂಲ್‌ನ ಆಡಳಿತಾಧಿಕಾರಿ ಹಿಜಾ ಮೊಹನ್‌ದಾಸ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಪರಾಹ್ನ 2ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ವಿವೇಕಾನಂದ ಕಾಲೇಜಿನ ವಿಶ್ರಾಂತ ಉಪನ್ಯಾಸರಾದ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅಧ್ಯಕ್ಷತೆ ವಹಿಸುವರು. ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ದಶಪ್ರಣತಿಯನ್ನು ಉದ್ಘಾಟಿಸುವರು. ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ, ಸುದಾನ ವಸತಿಯುತ ವಿದ್ಯಾಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು. ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನ ವಿ. ರೈ ಅವರಿಂದ ಗುರುವಂದನೆ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಗತಿ ಸ್ಟಡಿ ಸೆಂಟರ್ ಎಂಬ ಹೆಸರಿನಲ್ಲಿ 2008ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಅನುತೀರ್ಣರಾದ ಮತ್ತು ಸೌಲಭ್ಯ ವಂಚಿತರಾದ ವಿದ್ಯಾರ್ಥಿಗಳಿಗೆ ಅನುಭವವಸ್ಥ ಹಾಗೂ ನುರಿತ ಪ್ರತಿಭಾವಂತ ಉಪನ್ಯಾಸಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ಸಂಸ್ಥೆಯು ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ ಕೊಡಗು, ಮೈಸೂರು, ಬೆಂಗಳೂರು, ಕೋಲಾರ, ಹಾಸನ, ಚಿತ್ರದುರ್ಗ, ಉತ್ತರ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ, ಗದಗ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. 10 ವರ್ಷಗಳ ಯಶಸ್ವಿ ಪಯಣದ ಹಿನ್ನೆಲೆಯಲ್ಲಿ ದಶಪ್ರಣತಿ ಎಂಬ ಹೆಸರಿನೊಂದಿಗೆ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಎಂದರು.
ಸಂಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಸೀಮಿತಗೊಳಿಸದೆ ವಿದ್ಯಾರ್ಥಿಗಳಲ್ಲಿ ಭೌಧಿಕ ಮಟ್ಟ ಹೆಚ್ಚಿಸುವಲ್ಲಿಯೂ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜೊತೆಗೆ ಪ್ರತಿಭಾ ದಿನಾಚರಣೆ, ಕ್ರೀಡೋತ್ಸವ, ಓಣಂ, ಗಣೇಶೋತ್ಸವ, ಸರಸ್ವತಿ ಪೂಜೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಿಸ್ತಿಗೆ ಪ್ರಥಮ ಆಧ್ಯತೆಯನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಒಟ್ಟು 1,232 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗಾಗಲೇ 5,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಸಂತಸದ ವಿಚಾರ ಎಂದರು.
ಪ್ರಗತಿ ಸ್ಟಡಿ ಸೆಂಟರ್ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಅರ್ತಿಕಜೆ ಗಣಪತಿ ಭಟ್, ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್, ಉಪಪ್ರಾಂಶುಪಾಲೆ ಗೀತಾ ಕೊಂಕೋಡಿ ಹಾಗೂ ಉಪನ್ಯಾಸಕಿ ರಕ್ಷಿತಾ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.