ಲಾರಾ ದಾಖಲೆಯನ್ನು ಹಿಂದಿಕ್ಕಿದ ಕೊಹ್ಲಿ

Update: 2017-12-03 13:26 GMT

 ಹೊಸದಿಲ್ಲಿ, ಡಿ.3: ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನ ಎರಡನೆ ದಿನವಾಗಿರುವ ರವಿವಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್‌ನ ಗ್ರೇಟ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 5ದ್ವಿಶತಕಗಳನ್ನು ದಾಖಲಿಸಿದ್ದ ಲಾರಾ ದಾಖಲೆಯನ್ನು ಹಿಂದಿಕ್ಕಿರುವ ಕೊಹ್ಲಿ ಅವರು 6ನೇ ದ್ವಿಶತಕಗಳೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮತ್ತು ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ಮತ್ತು ಸೆಹ್ವಾಗ್ 6 ದ್ವಿಶತಕದ ಸಾಧನೆ ಮಾಡಿದ್ದರು. ಸಚಿನ್ 6 ದ್ವಿಶತಕ ದಾಖಲಿಸಿದ್ದರೆ, ಸೆಹ್ವಾಗ್ ಅವರು 4 ದ್ವಿಶತಕ ಮತ್ತು 3 ತ್ರಿಶತಕದ ಸಾಧನೆ ಮಾಡಿದ್ದಾರೆ.

ಕೊಹ್ಲಿ 238 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ ದ್ವಿಶತಕ ಪೂರೈಸಿದರು.

ಭಾರತ ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 371 ರನ್ ಗಳಿಸಿತ್ತು.

 ನಾಯಕ ವಿರಾಟ್ ಕೊಹ್ಲಿ ಔಟಾಗದೆ 156 ರನ್ ಮತ್ತು ರೋಹಿತ್ ಶರ್ಮ ಔಟಾಗದೆ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇವರು ಇಂದು ಬ್ಯಾಟಿಂಗ್ ಮುಂದುವರಿಸಿ 5ನೇ ವಿಕೆಟ್‌ಗೆ ಜೊತೆಯಾಟದಲ್ಲಿ 135 ರನ್ ಸೇರಿಸಿದರು. ರೋಹಿತ್ ಶರ್ಮ 65 ರನ್ ಗಳಿಸಿ ಔಟಾದರು.

ಭಾರತ 122 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 518 ರನ್ ಗಳಿಸಿದೆ. ಕೊಹ್ಲಿ 239 ರನ್ ಮತ್ತು ರವಿಚಂದ್ರನ್ ಅಶ್ವಿನ್ 4 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News