ದ್ವೇಷ ಸಂಸ್ಕೃತಿಯಿಂದ ಬಹುತ್ವಕ್ಕೆ ಅಪಾಯ- ಡಾ. ರಂಜಾನ್ ದರ್ಗಾ

Update: 2017-12-03 12:43 GMT

ಮೂಡುಬಿದಿರೆ (ರತ್ನಾಕರ ವರ್ಣಿ ವೇದಿಕೆ, ಗೋಪಾಲಕೃಷ್ಣ ಅಡಿಗ ವೇದಿಕೆ). ಡಿ. 3: ವೈಚಾರಿಕತೆಯನ್ನು ಕಳೆದುಕೊಂಡ ದ್ವೇಷ ಸಂಸ್ಕೃತಿಯಿಂದ ಬಹುತ್ವಕ್ಕೆ ಅಪಾಯವಿದೆ. ನಂಬಿಕೆ ವೈಚಾರಿಕತೆ ಇಲ್ಲದೆ ಜಗತ್ತು ಮುಂದುವರಿಯಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ರಂಜಾನ್ ದರ್ಗಾ ತಿಳಿಸಿದ್ದಾರೆ.

ನಂಬಿಕೆ ಅಪನಂಬಿಕೆಯಾದಾಗ, ವೈಚಾರಿಕತೆಯನ್ನು ಕಳೆದುಕೊಂಡಾಗ ದ್ವೇಷ ಸಂಸ್ಕೃತಿ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ವೈಚಾರಿಕತೆಗೆ ಮಾನವೀಯತೆ ತಳಹದಿಯಾಗಬೇಕು. ವಿವಿಧ ಧರ್ಮಗಳು ಇವೆ ಎಂದರೆ ವಿವಿಧ ನಂಬಿಕೆಗಳು ಇವೆ ಎಂದರ್ಥ. ಇದು ಬಹುತ್ವದ ಸಂಕೇತವಾಗಿದೆ ಎಂದು ರಂಜಾನ್ ದರ್ಗಾ ತಿಳಿಸಿದರು.

ಧರ್ಮ ಅಂದರೆ ನಂಬಿಕೆ ಎಂದು ಅರ್ಥ. ನಂಬಿಕೆ ವೈಚಾರಿಕತೆಯನ್ನು ಒಳಗೊಂಡಿರಬೇಕು. ಮೂಢನಂಬಿಕೆಗೆ ಜೋತು ಬಿದ್ದಾಗ ಬದುಕು ಕುಂಠಿತವಾಗುತ್ತದೆ. ಧರ್ಮ ವೈಚಾರಿಕತೆಯನ್ನು ಒಳಗೊಂಡಿರಬೇಕು ಎನ್ನುವುದು ಧರ್ಮ ಸಂಸ್ಥಾಪಕರ ಅಭಿಪ್ರಾಯ. ಮನುಷ್ಯ ಹೇಗಾದ ಎನ್ನುವ ಪ್ರಶ್ನೆಗೆ ವಿಜ್ಞಾನ ಉತ್ತರ ಕೊಡುತ್ತದೆ. ಆದರೆ ಮನುಷ್ಯ ಏಕಿರಬೇಕು ಎನ್ನುವ ಪ್ರಶ್ನೆಗೆ ನಂಬಿಕೆಗಳು ಉತ್ತರ ನೀಡುತ್ತವೆ. ಈ ಪ್ರಶ್ನೆಗೆ ವಿಜ್ಞಾನ ಉತ್ತರ ನೀಡಲು ಸಾಧ್ಯವಿಲ್ಲ ಎಂದು ರಂಜಾನ್ ದರ್ಗಾ ತಿಳಿಸಿದ್ದಾರೆ.

‘‘ಸಹಸ್ರಾರು ವರುಷಗಳ ಹಿಂದೆ ಇದ್ದ ದೇಶದ ಥಡಿ ಹವಾ ಈಗ ಗರಂ ಆಗಿದೆ’’:- ಕನ್ನಡ ಸಾಹಿತ್ಯಕ್ಕೆ ವಿಶ್ವ ವ್ಯಾಪಿಯ ನೆಲೆ ಇದೆ. ಒಂಭತ್ತನೆ ಶತಮಾನದ ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಅನ್ಯರ ವಿಚಾರ, ಪರಧರ್ಮದ ಬಗ್ಗೆ ಇರುವ ಸಹನ ಶೀಲ ಮನಸ್ಸೇ ಶುದ್ಧ ಬಂಗಾರ ಎಂದಿದ್ದಾರೆ.

ಈ ರೀತಿ ಹೇಳುವ ಮೂಲಕ ನಮ್ಮ ಪೂರ್ವಜರು ಬಹುತ್ವವನ್ನು ಗೌರವಿಸಬೇಕು ಎಂಬ ನಂಬಿಕೆಯನ್ನು ಹೊಂದಿದ್ದರು. ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ಜಾತಿ, ಕುಲ, ಲಿಂಗ ಭೇದವಿಲ್ಲದೆ ಸಂಕುಲ ಪ್ರಜ್ಞೆಯ ಮೂಲಕ ಎಲ್ಲರನ್ನು ಒಳಗೊಳ್ಳುವ ಚಳವಳಿ ಶರಣರ ಮೂಲಕ ಮೂಡಿ ಬಂತು. ಯಾವ ಬ್ರಹ್ಮ ಕಳೆ, ಕ್ಷಾತ್ರ ತೇಜಸ್ಸು ಇಲ್ಲ ಮಾನವ ತೇಜಸ್ಸು ಒಂದೇ ಹೊರತು ಬೇರೆ ತೇಜಸ್ಸಿಲ್ಲ ಎಂದು ಮಾನವೀಯತೆಯೊಂದಿಗೆ ಬಹುತ್ವದ ಅರಿವು ಮೂಡಿಸಿದರು. ಆದರೆ ಬಹುತ್ವದ ಪ್ರತಿಪಾದನೆಯಲ್ಲೂ ವೈರುಧ್ಯಗಳನ್ನು ಜಗತ್ತು ಕಂಡಿದೆ.

ಭಾರತದ ಖಾನ್ ಅಬ್ದುಲ್ ಗಫಾರ್ ಖಾನ್ ಬಹುತ್ವದೊಂದಿಗೆ ದೇಶವನ್ನು ಗೌರವಿಸಿದರು.ಬಿನ್ ಲಾಡೆನ್ ಬಹುತ್ವದೊಂದಿಗೆ ಹಲವರನ್ನು ಆಹುತಿ ತೆಗೆದುಕೊಂಡ,ಗಾಂಧಿ ಹಿಂದು ಧರ್ಮದ ನೆಲೆಯಲ್ಲಿಯೇ ಬಹುತ್ವದ ಪಾಠ ಹೇಳಿದರು ಅದೇ ಗಾಂಧಿಯನ್ನು ಹಿಂದುತ್ವದ ಹೆಸರಿನಲ್ಲಿ ಗೋಡ್ಸೆ ಕೊಲೆ ಮಾಡಿದ. ಮದರ್ ಥೆರೆಸಾ ಕ್ರೈಸ್ತ ಧರ್ಮದ ಮೂಲಕ ಬಹುತ್ವದ ಮೌಲ್ಯದಲ್ಲಿ ಸಾವಿರಾರು ಅನಾಥ ಮಕ್ಕಳ ಬಾಳಿಗೆ ಬೆಳಕಾದರು. ಅದೇ ರೀತಿ ಹಿಟ್ಲರ್ ಕ್ರೈಸ್ತ ಧರ್ಮದ ಹೆಸರಿನಲ್ಲಿ ಬಹುತ್ವವನ್ನು ಬಳಸಿಕೊಂಡು ಎರಡನೆ ಮಹಾಯುದ್ಧದ ಮೂಲಕ 5 ಕೋಟಿ ಜನರ ಸಾವಿಗೆ ಕಾರಣರಾದ. ಈ ಪೈಕಿ ಶೇ 80ರಷ್ಟು ಜನರು ಮಕ್ಕಳು, ಮಹಿಳೆಯರು, ಜನಸಾಮಾನ್ಯರು. ಸೈನಿಕರು ಶೇ 20 ಮಾತ್ರ.

ಇತಿಹಾಸದಲ್ಲಿ ನಡೆದ ತಪ್ಪುಗಳನ್ನು ನೆನಪಿಸಿಕೊಂಡು ದ್ವೇಷ ಸಾಧನೆಗೆ ತೊಡಗಿದರೆ ನಾವು ಹುಲುಮಾನವರಾಗುತ್ತೇವೆ. 1500 ವರುಷಗಳ ಹಿಂದೆ ಪೈಗಂಬರರು ಅರಬಿಸ್ತಾನದಲ್ಲಿ ನಾನಿದ್ದರೂ ನನ್ನೊಳಗೆ ಅರಬಿಸ್ತಾನ ಇಲ್ಲ. ನಾನು ಹಿಂದುಸ್ತಾನದಲ್ಲಿ ಇಲ್ಲ ಆದರೆ ಹಿಂದೂಸ್ತಾನ ನನ್ನೊಳಗೆ ಇದೆ. ಹಿಂದೂಸ್ತಾನದಿಂದ ತಂಪುಗಾಳಿ ಅರಬಿಸ್ತಾನದ ಕಡೆ ಬೀಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ದೇಶದಲ್ಲಿ ಹಲವಾರು ವರುಷಗಳ ಹಿಂದೆ ಇದ್ದ ದಂಡಿ ಹವಾ ಈಗ ಗರಂ ಆಗಿದೆ. ಈ ನೆಲದಲ್ಲಿ ಇದ್ದ ಬಹುತ್ವದ ಶಕ್ತಿಯನ್ನು ಜಗತ್ತು ಗುರುತಿಸಿದೆ ಎಂದು ರಂಜಾನ್ ದರ್ಗಾ ತಿಳಿಸಿದರು.

ಬಹುತ್ವ ಈ ದೇಶದ ಅತ್ಮ, ಈ ಆತ್ಮ ರಕ್ಷಣೆಯ ಹೊಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿ ಇಡೀ ವಿಶ್ವದ ಬಹುತ್ವವನ್ನು ರಕ್ಷಿಸುವ ಎಲ್ಲಾ ಧರ್ಮವನ್ನು ಮೀರಿ ನಿಂತ ಭಾರತೀಯ ಮನಸ್ಸು. ಋಗ್ವೇದದಲ್ಲಿ ಇಡೀ ಜಗತ್ತು ಒಂದು ಗುಬ್ಬಿಯ ಗೂಡು ಎಂದಿದೆ. ಅದರಲ್ಲಿ ಮರಿಗಳು ಹೇಗೆ ಬದುಕುತ್ತವೆಯೋ ಹಾಗೆ ಮನುಷ್ಯರು ಈ ಜಗತ್ತಿನಲ್ಲಿ ಬದುಕಬೇಕು. ಯುದ್ಧ, ದ್ವೇಷದಿಂದ ಜಗತ್ತು ಉಳಿಯದು ಜೈನ, ಬೌದ್ಧ, ಲಿಂಗಾಯತ ಧರ್ಮಗಳು ಬಹುತ್ವವಾದಿ ಸಿದ್ಧಾಂತವನ್ನು ನಂಬಿಕೊಂಡ ಧರ್ಮ. ನಂಬಿಕೆ ಮತ್ತು ವೈಚಾರಿಕತೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ರಂಜಾನ್ ದರ್ಗಾ ತಿಳಿಸಿದರು.

ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ ಹಾಗೂ ನುಡಿಸಿರಿ ಸಮಿತಿಯ ಉಪಾಧ್ಯಕ್ಷ ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News