ಮಗುವನ್ನು ನರ್ಸರಿಯಲ್ಲಿಡಲು ಮ್ಯಾಕ್ಸ್ ಆಸ್ಪತ್ರೆ 50 ಲ.ರೂ.ಕೇಳಿತ್ತು: ತಂದೆಯ ದೂರು

Update: 2017-12-03 13:10 GMT

ಹೊಸದಿಲ್ಲಿ,ಡಿ.3: ಅವಧಿಪೂರ್ವ ಜನಿಸಿದ್ದ ಎರಡು ಶಿಶುಗಳ ಪೈಕಿ ಒಂದು ಜೀವಂತವಿದ್ದರೂ ಎರಡೂ ಸತ್ತಿವೆ ಎಂದು ಹೇಳಿ ಪೋಷಕರಿಗೊಪ್ಪಿಸಿದ್ದ ಇಲ್ಲಿಯ ಮ್ಯಾಕ್ಸ್ ಆಸ್ಪತ್ರೆ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ಮಗುವನ್ನು ನವಜಾತ ಶಿಶುಗಳ ವಿಶೇಷ ಕೋಣೆ(ನರ್ಸರಿ)ಯಲ್ಲಿರಿಸಲು ಆಸ್ಪತ್ರೆಯು 50 ಲ.ರೂ.ಮತ್ತು ತನ್ನ ಪತ್ನಿಯು ಬದುಕುವ ಸಾಧ್ಯತೆಯನ್ನು ಹೆಚ್ಚಿಸಲು 35,000 ರೂ.ಗಳನ್ನು ಕೇಳಿತ್ತು ಎಂದು ಮಗುವಿನ ತಂದೆ ಆಶಿಷ್ ಕುಮಾರ್ ಅವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ನ.30ರಂದು ಕುಮಾರ್ ಪತ್ನಿ ವರ್ಷಾ ಅವಧಿಪೂರ್ವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಶಿಶು ಹುಟ್ಟುವಾಗಲೇ ಮೃತಪಟ್ಟಿದ್ದರೆ, ಇನ್ನೊಂದು ಶಿಶುವು ಸ್ವಲ್ಪ ಹೊತ್ತಿನ ಬಳಿಕ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದರು. ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಒಯ್ಯುತ್ತಿದ್ದಾಗ ಒಂದು ಮಗು ಜೀವಂತವಿದ್ದುದು ಪತ್ತೆಯಾಗಿತ್ತು.

ಈ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ ಮತ್ತು ಲೂಟಿಯನ್ನು ತಡೆಯಲು ಕಾನೂನೊಂದನ್ನು ತರುವಂತೆ ಅವರು ರವಿವಾರ ಟ್ವೀಟರ್‌ನಲ್ಲಿ ಆಗ್ರಹಿಸಿದ್ದಾರೆ.

ತೀವ್ರ ಅಸ್ವಸ್ಥವಾಗಿರುವ ಮಗುವಿಗೆ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಕುಮಾರ್, ಮ್ಯಾಕ್ಸ್ ಆಸ್ಪತ್ರೆಯು ಮಕ್ಕಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನೀಡಿದ್ದರಿಂದ ಅದಕ್ಕೆ ಸೋಂಕು ತಗುಲಿದೆ ಎಂದೂ ಆರೋಪಿಸಿದ್ದಾರೆ.

ತನ್ನ ಪತ್ನಿಯು ಬದುಕುವ ಸಾಧ್ಯತೆ ಶೇ.15ರಷ್ಟಿದ್ದು, ಆಕೆಗೆ 35,000 ರೂ ವೆಚ್ಚದಲ್ಲಿ ಮೂರು ಚುಚ್ಚುಮದ್ದುಗಳನ್ನು ನೀಡಬೇಕಾಗುತ್ತದೆ ಎಂದೂ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ತನಗೆ ತಿಳಿಸಿದ್ದರು ಎಂದು ಕುಮಾರ್ ಹೇಳಿದರೆ, ಮಗುವು ಬದುಕಬಹುದು,ಆದರೆ ತಿಂಗಳುಗಟ್ಟಲೆ ಕಾಲ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ ಮತ್ತು ಇದಕ್ಕೆ 45-50 ಲ.ರೂ.ವೆಚ್ಚವಾಗುತ್ತದೆ ಎಂದು ಆಸ್ಪತ್ರೆಯು ತಿಳಿಸಿತ್ತು ಎಂದು ಕುಮಾರ್ ಮಾವ ಪ್ರವೀಣ ಮಲಿಕ್ ಸುದ್ದಿಸಂಸ್ಥೆಗೆ ತಿಳಿಸಿದರು.

ದಿಲ್ಲಿ ಪೊಲೀಸರು ಮ್ಯಾಕ್ಸ್ ಆಸ್ಪತ್ರೆಯ ವಿರುದ್ಧ ದಂಡನೀಯ ನರಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ಡಿಸಿಪಿ(ವಾಯುವ್ಯ) ಅಸ್ಲಾಂ ಖಾನ್ ರವಿವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News