‘ಒಖಿ’ ಚಂಡಮಾರುತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಸಾಧ್ಯವಿಲ್ಲ: ಕೇಂದ್ರ

Update: 2017-12-03 13:47 GMT

ತಿರುವನಂತಪುರಂ, ಡಿ.3: ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಕೋಲಾಹಲವೆಬ್ಬಿಸಿರುವ ‘ಒಖಿ’ ಚಂಡಮಾರುತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ರವಿವಾರ ತಿಳಿಸಿದ್ದು, ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತನಮ್, ಕೇಂದ್ರ ಸರಕಾರವು ಈಗಾಗಲೇ ರಾಜ್ಯಸರಕಾರಗಳಿಗೆ ಅಗತ್ಯ ಪರಿಹಾರ ನಿಧಿಯನ್ನು ನೀಡಿರುವುದಾಗಿ ತಿಳಿಸಿದರು.

  ಒಖಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕೆಂಬ ರಾಜ್ಯ ಸರಕಾರಗಳ ಮನವಿ ಪತ್ರ ನಮ್ಮ ಕೈಸೇರಿವೆ. ಆದರೆ ಅಂತಹ ಯಾವುದೇ ಯೋಜನೆ ಇಲ್ಲದಿರುವ ಕಾರಣ ಕೇಂದ್ರ ಸರಕಾರ ಆ ರೀತಿ ಘೋಷಿಸಲು ಸಾಧ್ಯವಿಲ್ಲ ಎಂದು ಅಲ್ಫೊನ್ಸ್ ತಿಳಿಸಿದರು. ಚಂಡಮಾರುತದ ಬಗ್ಗೆ ನಮಗೆ ಮುನ್ನೆಚ್ಚರಿಕೆ ನೀಡಲಾಗಿಲ್ಲ ಎಂಬ ಕೇರಳ ಸರಕಾರದ ಆರೋಪವನ್ನು ಕೇಂದ್ರ ಪ್ರವಾಸೋದ್ಯಮ ಸಚಿವರಾಗಿರುವ ಅಲ್ಫೋನ್ಸ್ ಮೊದಲಿಗೆ ಬೆಂಬಲಿಸಿದರೂ ನಂತರ ಈ ಬಗ್ಗೆ ಕೇಂದ್ರ ಸಂಸ್ಥೆಗಳು ನವೆಂಬರ್ 28-29ರಂದೇ ಮುನ್ಸೂಚನೆ ನೀಡಿದ್ದವು ಎಂದು ಸ್ಪಷ್ಟಗೊಳಿಸಿದ್ದರು.

ರಾಜ್ಯವು ಚಂಡಮಾರುತದ ಮುನ್ನೆಚ್ಚರಿಕೆಯನ್ನು ನವೆಂಬರ್ 30ರಂದು ಪಡೆದುಕೊಂಡಿತ್ತು ಅದಕ್ಕಿಂತ ಮೊದಲು ಯಾವುದೇ ಮುನ್ನೆಚ್ಚರಿಕೆ ನೀಡಲಾಗಿಲ್ಲ ಎಂದು ಪಿಣರಾಯಿ ವಿಜಯನ್ ಉಪಸ್ಥಿತಿಯಲ್ಲಿ ಅಲ್ಫೋನ್ಸ್ ತಿಳಿಸಿದ್ದರು.

ಸಮುದ್ರಕ್ಕೆ ತೆರಳಿರುವ ತಮ್ಮ ಸಂಬಂಧಿಕರನ್ನು ರಕ್ಷಿಸುವಲ್ಲಿ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮೀನುಗಾರರು ಪ್ರತಿಭಟನೆ ನಡೆಸುತ್ತಿರುವ ಕರಾವಳಿ ಪ್ರದೇಶ ಪುಂತುರಾಕ್ಕೆ ಅಲ್ಫೋನ್ಸ್ ಭೇಟಿ ನೀಡಿದರು. ರಾಜ್ಯದ 90 ಮೀನುಗಾರರನ್ನು ಇನ್ನಷ್ಟೇ ಸುರಕ್ಷಿತವಾಗಿ ದಡಕ್ಕೆ ತರಬೇಕಿದೆ ಎಂದವರು ಈ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News