ಮಲ್ಪೆ ಬಂದರಿನಲ್ಲಿ 200 ಹೊರರಾಜ್ಯಗಳ ಬೋಟುಗಳು ಠಿಕಾಣಿ
ಮಲ್ಪೆ, ಡಿ.3: ಓಖಿ ಚಂಡಮಾರುತದ ಪ್ರಭಾವದಿಂದ ಬೋಟುಗಳು ಕಳೆದ ಮೂರು ದಿನಗಳಿಂದ ಸಮುದ್ರಕ್ಕೆ ಇಳಿಯದೆ ಮಲ್ಪೆ ಬಂದರಿನಲ್ಲಿಯೇ ಲಂಗಾರು ಹಾಕಿದ್ದು, ಸುಮಾರು 200 ತಮಿಳುನಾಡು ಹಾಗೂ ಕೇರಳ ರಾಜ್ಯದ ಬೋಟುಗಳು ಇಲ್ಲಿಯೇ ಠಿಕಾಣಿ ಹೂಡಿವೆ.
ಮೂರು ದಿನಗಳಿಂದ ಸಮುದ್ರದಲ್ಲಿ ಅಬ್ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಒಂದು ಸಾವಿರಕ್ಕೂ ಅಧಿಕ ಆಳ ಸಮುದ್ರ ಮೀನುಗಾರಿಕೆಯ ಬೋಟುಗಳು ಬಂದರಿನಲ್ಲಿಯೇ ಉಳಿದುಕೊಂಡಿವೆ. ಅಲ್ಲದೆ ಚಂಡಮಾರುತದ ಅಪಾಯವನ್ನು ಅರಿತ ತಮಿಳುನಾಡು ಹಾಗೂ ಕೇರಳ ರಾಜ್ಯದ 200ಕ್ಕೂ ಅಧಿಕ ಬೋಟುಗಳಿಗೆ ಮಲ್ಪೆ ಬಂದರು ಸೇರಿಕೊಂಡಿವೆ. ಈ ಬೋಟುಗಳಲ್ಲಿರುವ ಮೀನುಗಳನ್ನು ಖಾಲಿ ಮಾಡಲು ಸ್ಥಳೀಯ ಮೀನುಗಾರರು ಅವಕಾಶ ಮಾಡಿಕೊಟ್ಟಿದ್ದಾರೆ.
ಕೇರಳದ ಕೊಚ್ಚಿ ಬಂದರಿನಲ್ಲಿರುವ ತಮಿಳುನಾಡಿನ 60 ಬೋಟುಗಳಲ್ಲಿ ಕೆಲವು ಮಲ್ಪೆ ಬೀಚ್‌ನ ತೀರದಲ್ಲಿದ್ದರೆ, ಕೆಲವು ಬೋಟುಗಳು ಬಂದರಿನಲ್ಲಿವೆ. ಇದರಲ್ಲಿ ಸುಮಾರು 1000 ಮೀನುಗಾರರು ಮಲ್ಪೆಯಲ್ಲಿ ನೆಲೆ ನಿಂತಿದ್ದಾರೆ. ಇದರಲ್ಲಿ ಬಹುತೇಕ ಆಂಧ್ರಪ್ರದೇಶದ ಮೀನುಗಾರರಿದ್ದಾರೆ. ‘ನಾವು ಕೇರಳ ದಿಂದ ಮೀನುಗಾರಿಕೆ ಮಾಡಲು ಬಂದಿದ್ದು, ಆದರೆ ಇಲಾಖೆಯ ಸೂಚನೆ ಯಂತೆ ಸದ್ಯಕ್ಕೆ ಮಲ್ಪೆಯಲ್ಲಿ ಬೋಟುಗಳನ್ನು ನಿಲ್ಲಿಸಿದ್ದೇವೆ. ಇನ್ನು ಎಷ್ಟು ದಿನ ಇಲ್ಲಿ ಇರಬೇಕಾಗುತ್ತದೆ ಎಂಬುದು ಗೊತ್ತಿಲ್ಲ’ ಎನ್ನುತ್ತಾರೆ ಆಂಧ್ರಪ್ರದೇಶದ ಮೀನುಗಾರ ಬಿ.ನರಸಿಂಹರಾವ್.
‘ಜಿಲ್ಲಾಡಳಿತದ ಸೂಚನೆಯಂತೆ ಕಳೆದ ಮೂರು ದಿನಗಳಿಂದ ಮೀನುಗಾರಿಕೆ ತೆರಳದಂತೆ ಬಂದರಿನಲ್ಲಿ ಮೈಕ್ ಮೂಲಕ ಹೇಳಲಾಗುತ್ತಿದೆ. ಹುಣ್ಣಿಮೆ ಮತ್ತು ಚಂಡಮಾರುತ ಒಂದೇ ಸಮಯಕ್ಕೆ ಬಂದಿರುವುದರಿಂದ ಅಲೆಗಳ ಅಬ್ಬರ ಹೆಚ್ಚಾಗಿದೆ. ಆದರೆ ಮಲ್ಪೆ ಜನ ನಿರಾಳರಾಗಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ 200-250 ಬೋಟುಗಳು ಮಹಾರಾಷ್ಟ್ರದ ರತ್ನಗಿರಿಯಲ್ಲಿವೆ. ಆದರೆ ಅಲ್ಲಿ ಯಾವುದೇ ಅಪಾಯ ಇಲ್ಲ. ವಯರ್‌ಲೆಸ್ ಮೂಲಕ ಅವರೊಂದಿಗೆ ಸಂಪರ್ಕ ದಲ್ಲಿವೆ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಕಡಲು ಪ್ರಕ್ಷುಬ್ದಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳವುದನ್ನು ನಿಷೇಧಿಸಲಾಗಿದೆ. ಟಿಕೇಟ್ ಕೌಂಟರ್‌ನಲ್ಲಿ ‘ಚಂಡಮಾರುತದ ಎಚ್ಚರಿಕೆ- ನಿಷೇಧ’ ಎಂಬ ನೋಟೀಸ್‌ನ್ನು ಹಾಕಲಾಗಿದೆ. ಸೈಂಟ್ ಮೇರಿಸ್‌ಗೆ ತೆರಳಲು ಬಂದಿದ್ದ ಹೊರ ರಾಜ್ಯದ ಯುವಕರು ನಿರಾಸೆಯಿಂದ ಮರಳುತ್ತಿರುವುದು ಕಂಡುಬಂದವು. ಅದೇ ರೀತಿ ಮಲ್ಪೆ ತೀರದಲ್ಲಿದ್ದ ಬೋಟುಗಳನ್ನು ಸುರಕ್ಷಿತ ಜಾಗಗಳಿಗೆ ಕೊಂಡೊಯ್ಯಲಾಗುತ್ತಿತ್ತು.
ಮಲ್ಪೆ ಬೀಚ್: ಪ್ರವಾಸಿಗರಿಗೆ ಪೊಲೀಸರ ಎಚ್ಚರಿಕೆ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್‌ನಲ್ಲಿ ರಜೆ ದಿನ ವಾದ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಪೊಲೀಸರು ನೀರಿಗಿಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾಡಳಿತದ ಸೂಚನೆಯಂತೆ ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ನೇತೃತ್ವ ದಲ್ಲಿ ಪೊಲೀಸರು ಮಧ್ಯಾಹ್ನ ನೀರಿನಲ್ಲಿ ಆಡುತ್ತಿದ್ದ ಪ್ರವಾಸಿಗರನ್ನು ಮೇಲಕ್ಕೆ ಕಳುಹಿಸಿದರು. ಬೀಚ್‌ನಲ್ಲಿ ಉದ್ದಕ್ಕೆ ಹಗ್ಗ ಹಾಕಿ ದೂರದಲ್ಲೇ ಸಮುದ್ರವನ್ನು ವೀಕ್ಷಿಸುವಂತೆ ಪೊಲೀಸರು ಸೂಚಿಸಿದರು. ಸಂಜೆವರೆಗೂ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಆದರೂ ಪ್ರವಾಸಿಗರು ಯಾವುದೇ ಭಯ ಇಲ್ಲದೆ ನೀರಿಗೆ ಇಳಿದು ಆಟ ಆಡುತ್ತಿರುವುದು ಕಂಡುಬಂತು.