×
Ad

ನ್ಯಾ.ಲೋಯಾ ಸಾವಿನ ಕುರಿತು ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆಗೆ ಆಗ್ರಹ

Update: 2017-12-03 21:08 IST

ಹೊಸದಿಲ್ಲಿ,ಡಿ.3: ನ್ಯಾ.ಬಿ.ಎಚ್.ಲೋಯಾ ಅವರ ಸಾವಿನ ಕುರಿತು ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆಯನ್ನು ನಡೆಸುವಂತೆ ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿಗಳು, ನಾಲ್ವರು ಮಾಜಿ ರಾಯಭಾರಿಗಳು ಮತ್ತು ರಾಜ್ಯ ಸರಕಾರವೊಂದರ ಮಾಜಿ ಮುಖ್ಯ ಮಾಹಿತಿ ಆಯುಕ್ತರೋರ್ವರು ಸೇರಿದಂತೆ 32 ನಿವೃತ್ತ ಸರಕಾರಿ ನೌಕರರು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಮತ್ತು ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಕೋರಿಕೊಂಡಿದ್ದಾರೆ.

ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್(ನಿ)ಎಲ್.ರಾಮದಾಸ್ ಅವರು ನ್ಯಾ.ಮಿಶ್ರಾ ಮತ್ತು ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಿರುವ ಮನವಿಯೊಂದಿಗೆ ನಿವೃತ್ತ ಸರಕಾರಿ ನೌಕರರ ಪತ್ರವನ್ನು ಲಗತ್ತಿಸಲಾಗಿದೆ. ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಎಚ್.ಮಾರ್ಲಪಲ್ಲೆ, ದಿಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಎ.ಪಿ.ಶಾಹ್ ಅವರೂ ವಿಚಾರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

 ಕನಿಷ್ಠ ನ್ಯಾ.ಲೋಯಾ ಅವರ ಕುಟುಂಬವು ಎತ್ತಿರುವ ಪ್ರಶ್ನೆಗಳಿಗಾದರೂ ಉತ್ತರಿಸಲು ಮತ್ತು ಭಾರತೀಯ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಲು ಈ ಕಾಲಘಟ್ಟದಲ್ಲಿ ನ್ಯಾಯಾಂಗ ವಿಚಾರಣೆಯು ಅತ್ಯಂತ ಅಗತ್ಯವಾಗಿದೆ ಎಂದು ಅಡ್ಮಿರಲ್ ಎಲ್.ರಾಮದಾಸ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.

 ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಗುಜರಾತಿನ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳಾಗಿರುವ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್. ಲೋಯಾ ಅವರು ಪ್ರಕರಣವನ್ನು ವಹಿಸಿಕೊಂಡ ಆರು ತಿಂಗಳುಗಳ ಬಳಿಕ, 2014,ಡಿ.1ರಂದು ನಿಧನರಾಗಿದ್ದು, ಹೃದಯಾಘಾತ ಅವರ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಅವರ ಸಾವಿನ ಹಿಂದೆ ಒಳಸಂಚು ಅಡಗಿತ್ತು ಎಂದು ಕುಟುಂಬವು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News