×
Ad

ಕೋಮು ಸೌಹಾರ್ದ ಕೆಡಿಸುವ ಯತ್ನ: ಖಾದರ್‌

Update: 2017-12-03 21:18 IST

ಮಂಗಳೂರು, ಡಿ. 3: ಚಿಕ್ಕಮಗಳೂರಿನಲ್ಲಿ ಸೌಹಾರ್ದದ ಕೇಂದ್ರವಾಗಿರುವ ಬಾಬಾ ಬುಡಾನ್‌ಗಿರಿಯ ಗೋರಿಗಳಿಗೆ ಹಾನಿಗೊಳಿಸಿರುವ ಕಿಡಿಗೇಡಿಗಳ ಕೃತ್ಯವು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ಇಂತಹ ಕೆಲಸಗಳಿಗೆ ಸರಕಾರ ಅವಕಾಶ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಬಾಬಾ ಬುಡಾಗಿರಿಗೆ ಹಲವು ಧರ್ಮೀಯರು ಭೇಟಿ ನೀಡುವ ಮೂಲಕ ಅದು ಸೌಹಾರ್ದದ ಕೇಂದ್ರವಾಗಿ ಮಾರ್ಪಟ್ಟಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಧಾರ್ಮಿಕ ಕೇಂದ್ರಗಳ ಗೋರಿಗಳಿಗೆ ಹಾನಿಗೊಳಿಸುವ ಮೂಲಕ ಸಾಮಾಜಿಕ ಸೌಹಾರ್ದವನ್ನು ಕೆಡಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಕೋಮು ಸೌಹಾರ್ದ ಕಾಪಾಡಲು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸುವುದಾಗಿ ಅಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಖಾದರ್ ತಿಳಿಸಿದರು.

ಘಟನೆಗೆ ಸಂಬಂಧಿಸಿ ನಾಗರಿಕರು ತಾಳ್ಮೆ ಕಳೆದುಕೊಳ್ಳಬಾರದು. ವದಂತಿಗಳಿಗೆ ಕಿವಿಗೊಡಬಾರದು. ಕೋಮು ಸೌಹಾರ್ದವನ್ನು ಹಾಳು ಮಾಡುವ ಸಮಾಜ ಘಾತುಕ ಶಕ್ತಿಯನ್ನು ಮಟ್ಟ ಹಾಕಲು ನಾಗರಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಸಚಿವ ಖಾದರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News