13 ವರ್ಷಗಳ ಬಳಿಕ ಪ್ರಕರಣದ ವಿಚಾರಣೆ ಆರಂಭ: ಕಕ್ಷಿದಾರನೊಂದಿಗೆ 'ಕ್ಷಮೆ' ಕೇಳಿದ ಸುಪ್ರೀಂ ಕೋರ್ಟ್

Update: 2017-12-03 16:33 GMT

ಹೊಸದಿಲ್ಲಿ,ಡಿ.3: ಪ್ರಕರಣವೊಂದರಲ್ಲಿ ವಿಳಂಬವಾಗಿದ್ದನ್ನು ನೇರವಾಗಿ ಒಪ್ಪಿಕೊಂಡಿ ರುವ ಸರ್ವೋಚ್ಚ ನ್ಯಾಯಾಲಯವು ಕಕ್ಷಿದಾರನೊಂದಿಗೆ ಕ್ಷಮೆ ಕೋರಿದೆ.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರೋರ್ವರು ಒಂದೇ ದಿನ ಎರಡು ಪ್ರತ್ಯೇಕ, ಆದರೆ ಪರಸ್ಪರ ಸಂಬಂಧಿಸಿದ ಪ್ರಕರಣಗಳಲ್ಲಿ ವಿರುದ್ಧಾರ್ಥದ ಆದೇಶಗಳನ್ನು ಹೊರಡಿಸಿದ್ದರಿಂದ ಕ್ರಿಮಿನಲ್ ಪ್ರಕರಣದ ವಿಚಾರಣೆಯ ಆರಂಭವು 13 ವರ್ಷಗಳಷ್ಟು ವಿಳಂಬಗೊಂಡಿತ್ತು.

 ನ್ಯಾಯಾಧೀಶರ ಒಂದು ಆದೇಶ ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ತಡೆ ಹಿಡಿದಿದ್ದು ಮತ್ತು ಇನ್ನೊಂದು ಆದೇಶವು ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಿದ್ದು, ಈ ಕಾನೂನು ಸಮಸ್ಯೆಯನ್ನು ಸೃಷ್ಟಿಸಿತ್ತು ಎಂದು ಹೇಳಿದ ನ್ಯಾಯಮೂರ್ತಿ ಗಳಾದ ಆರ್.ಕೆ.ಅಗರವಾಲ್ ಮತ್ತು ಸಂಜಯ ಕಿಶನ್ ಕೌಲ್ ಅವರ ಪೀಠವು, ದೂರುದಾರ ಮಹಿಳೆಯ ಮೇಲ್ಮನವಿಗಳನ್ನು ಅಂಗೀಕರಿಸಿತು.

ಉತ್ತರಾಖಂಡದ ರೂರ್ಕಿ ನಿವಾಸಿ ಶ್ಯಾಮಲತಾ ಅವರು ತನ್ನ ಇಬ್ಬರು ಸೋದರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನ ಅಂಗಡಿಯನ್ನು ಕಬಳಿಸಿದ್ದಾರೆ ಎಂದು 2004ರಲ್ಲಿ ಹರಿದ್ವಾರದ ಎಸ್‌ಎಸ್‌ಪಿಯವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಆಕೆಯ ಸೋದರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. 2009ರಲ್ಲಿ ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಆದರೆ ಕಾನೂನಿನ ತೊಡಕಿನಿಂದಾಗಿ 13 ವರ್ಷಗಳು ಕಳೆದರೂ ಪ್ರಕರಣದ ವಿಚಾರಣೆಯೇ ಆರಂಭವಾಗಿರಲಿಲ್ಲ.

ಈ ಅವಧಿಯಲ್ಲಿ ಶ್ಯಾಮಲತಾ ನಿಧನರಾಗಿದ್ದು, ಅವರ ಕಾನೂನಾತ್ಮಕ ಪ್ರತಿನಿಧಿಗಳು ನ್ಯಾಯಾಲಯದಲ್ಲಿ ಹೋರಾಟ ಮುಮದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News