×
Ad

ಹಾರ್ದಿಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು: ‘ನೊಂದ’ ಯುವತಿಯನ್ನು ಭೇಟಿಯಾಗಲಿರುವ ಎನ್‌ಸಿಡಬ್ಲೂ

Update: 2017-12-03 22:16 IST

ಹೊಸದಿಲ್ಲಿ,ಡಿ.3: ಗುಜರಾತ್‌ನ ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಲೈಂಗಿಕ ಕಿರುಕುಳದ ದೂರೊಂದನ್ನು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲೂ)ವು ಸ್ವೀಕರಿಸಿದ್ದು, ಸಂತ್ರಸ್ತ ಯವತಿಯನ್ನು ಭೇಟಿಯಾಗಲು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ನೇತೃತ್ವದ ತಂಡವೊಂದು ರವಿವಾರ ರಾತ್ರಿ ಸೂರತ್‌ಗೆ ಪ್ರಯಾಣಿಸಿದೆ.

ಯುವತಿಯೇ ಖುದ್ದಾಗಿ ಈ ದೂರನ್ನು ಸಲ್ಲಿಸಿಲ್ಲ. ಆದರೆ ಆಕೆಯ ಕುರಿತು ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಿರುವ ದೂರಿನಲ್ಲಿ, ನೇರವಾಗಿ ಎದುರಿಗೆ ಬರಲು ಭೀತಿಯಿರುವುದರಿಂದ ಆಕೆ ಆಯೋಗದೊಂದಿಗೆ ರಹಸ್ಯವಾಗಿ ಮಾತನಾಡಲು ಬಯಸಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.
ತಂಡವು ಯುವತಿಯನ್ನು ಭೇಟಿಯಾಗಿ ವಿಷಯದ ಕುರಿತು ಸಮಗ್ರ ತನಿಖೆ ನಡೆಸಿದ ಬಳಿಕವೇ ಶರ್ಮಾ ಅವರು ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ ಎಂದು ಆಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾಮಾಜಕ ಮಾಧ್ಯಮಗಳಲ್ಲಿ ಹರಿದಾಡಿದ್ದ, ಹಾರ್ದಿಕ್ ಅವರದ್ದೆನ್ನಲಾದ ಸೆಕ್ಸ್ ವೀಡಿಯೊಗಳ ಕುರಿತು ದಿಲ್ಲಿಯ ವಕೀಲ ಗೌರವ ಗುಲಾಟಿ ಸಲ್ಲಿಸಿರುವ ದೂರನ್ನೂ ತಾನು ಪರಿಶೀಲಿಸುತ್ತಿರುವುದಾಗಿ ಆಯೋಗವು ಈ ಮೊದಲು ತಿಳಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News