×
Ad

ಈ ಚುನಾವಣೆ ಬಿಜೆಪಿಯ ವಿರುದ್ಧ ಜನರ ಹೋರಾಟ: ಹಾರ್ದಿಕ್ ಪಟೇಲ್

Update: 2017-12-03 22:39 IST

ಸೂರತ್, ಡಿ.3: ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯು ಬಿಜೆಪಿ ವಿರುದ್ಧ ಜನರು ನಡೆಸುವ ಹೋರಾಟ, ಜನರು ವರ್ಸಸ್ ಬಿಜೆಪಿ ಆಗಿದ್ದು ಅದು ಜನರ ಗೆಲುವಾಗಬೇಕೇ ಹೊರತು ಯಾರದ್ದೋ ಸೋಲಲ್ಲ ಎಂದು ತಿಳಿಸಿರುವ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಸೂರತ್‌ನ ರೋಡ್‌ಶೋನಲ್ಲಿ ಸೇರಿರುವ ಜನಸ್ತೋಮ ಜನರಿಗೆ ಬಿಜೆಪಿ ವಿರುದ್ಧ ಇರುವ ಆಕ್ರೋಶವನ್ನು ಬಿಂಬಿಸುತ್ತದೆ ಎಂದು ಹೇಳಿದರು.

24ರ ಹರೆಯದ ಹಾರ್ದಿಕ್ ಪಟೇಲ್ ಹಲವು ಸುತ್ತಿನ ಮಾತುಕತೆಗಳ ನಂತರ ತನ್ನ ಬೆಂಬಲವನ್ನು ಕಾಂಗ್ರೆಸ್‌ಗೆ ನೀಡುವುದಾಗಿ ಘೋಷಿಸಿದ್ದರು. ಅವರ ಸಭೆಗಳಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದು ಕಳೆದ ವಾರ ಹಾರ್ದಿಕ್ ಪಟೇಲ್ ಮೊರ್ಬಿಯಲ್ಲಿ ನಡೆಸಿದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ರ್ಯಾಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ವರದಿಗಳು ತಿಳಿಸಿದ್ದವು.

ಪಾಟಿದಾರ್ ಸಮುದಾಯಕ್ಕೆ ಸರಕಾರಿ ಉದ್ಯೋಗ ಮತ್ತು ಕಾಲೇಜುಗಳಲ್ಲಿ ಮೀಸಲಾತಿಯನ್ನು ಕೋರಿ ಎರಡು ವರ್ಷಗಳ ಹಿಂದೆ ಸೂರತ್‌ನಲ್ಲಿ ಹಾರ್ದಿಕ್ ಪಟೇಲ್ ಧರಣಿಯನ್ನು ಆರಂಭಿಸಿದ್ದರು. ಕತರ್ಗಾಂನಿಂದ ಯೋಗಿ ಚೌಕ್‌ವರೆಗೆ ನಡೆದ ಹತ್ತು ಕಿ.ಮೀಗಳ ರೋಡ್‌ಶೋ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸುತ್ತಿರುವ ಬರೂಚ್‌ನಿಂದ 70 ಕಿ.ಮೀ ದೂರದಲ್ಲಿದೆ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವನ್ನು ಕೆಳಗಿಳಿಸುವ ಪಣ ತೊಟ್ಟಿರುವ ಪಟೇಲ್ ಬಿಜೆಪಿಯು ತನ್ನ ನಿಷ್ಠಾವಂತ ಮತಬ್ಯಾಂಕ್ ಆಗಿರುವ ಪಾಟಿದಾರ್ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಸೂರತ್‌ನಲ್ಲಿ 16 ವಿಧಾನಸಭಾ ಸ್ಥಾನಗಳಿದ್ದು ಎಲ್ಲದರಲ್ಲೂ ಬಿಜೆಪಿ ಪಾರಮ್ಯವಿದೆ. ಆದರೆ ಇಲ್ಲಿ ಪಾಟಿದಾರ್ ಮತಗಳು ಅತ್ಯಂತ ಹೆಚ್ಚಾಗಿರುವ ಕಾರಣ ಈ ಬಾರಿ ಬಿಜೆಪಿ ಈ ಪ್ರದೇಶದ ಮೇಲೆ ಹೆಚ್ಚಿನ ಗಮನ ಕೇದ್ರೀಕರಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಗುಜರಾತ್‌ನಲ್ಲಿ ನಾಲ್ಕು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

2015ರಲ್ಲಿ ಹಾರ್ದಿಕ್ ಪಟೇಲ್‌ರ ರ್ಯಾಲಿಗಳು ನಡೆದ ನಂತರ ಇಲ್ಲಿ ನಡೆದ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ತನ್ನ ಸ್ಥಾನವನ್ನು ದುಪ್ಪಟ್ಟುಗೊಳಿಸಿತ್ತು. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಒಪ್ಪಂದವಾಗಿರುವ ಕಾರಣ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡುವಂತೆ ಹಾರ್ದಿಕ್ ಪಟೇಲ್ ತಮ್ಮ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News