ಕೂಳೂರು: ಜೋಡುಕರೆ ಕಂಬಳಕ್ಕೆ ಚಾಲನೆ
ಮಂಗಳೂರು, ಡಿ. 3: ಮಂಗಳೂರು ಕಂಬಳ ಸಮಿತಿಯ ವತಿಯಿಂದ ಕೂಳೂರಿನಲ್ಲಿ ನಡೆಯುವ ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ರವಿವಾರ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾಡಿನ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಈ ಕಂಬಳ ನೂರ್ಕಾಲ ನಡೆಯಬೇಕು. ಈ ಮೂಲಕ ಜಿಲ್ಲೆಯ ಜನತೆಗೆ ಕಂಬಳದ ಸೌಂದರ್ಯ ಲಭ್ಯವಾಗಬೇಕು ಎಂದರು.
ಜೋಡುಕರೆಯನ್ನು ಉದ್ಘಾಟಿಸಿದ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ನಮ್ಮ ಹಿರಿಯರು ಬಿಟ್ಟು ಹೋದ ಈ ಕಲೆ ಜಾತ್ರೆಯ ರೀತಿ ಆಚರಣೆಯಾಗಬೇಕು ಎಂದರು. ಶಾಸಕ ಜೆ.ಆರ್.ಲೋಬೊ ಮಾತನಾಡಿ, ನೆಲದ ಗ್ರಾಮೀಣ ಕ್ರೀಡೆಯಾಗಿರುವ ಕಂಬಳಕ್ಕೆ ಕಾನೂನು ತೊಡಕು ಎದುರಾದಾಗ ಅದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮರ್ಥವಾಗಿ ನಿಭಾಯಿಸಿ ಮತ್ತೆ ಕಂಬಳಕ್ಕೆ ಅವಕಾಶ ಮಾಡಿಕೊಟ್ಟಿವೆ. ಇದೀಗ ಮಂಗಳೂರು ನಗರದಲ್ಲೇ ದೊಡ್ಡ ಮಟ್ಟದ ಕಂಬಳ ಆಯೋಜನೆಗೊಂಡಿರುವುದು ಅಭಿಮಾನದ ವಿಚಾರ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ತುಳುನಾಡಿನಲ್ಲಿ ಕೋಣಗಳನ್ನು ತರಬೇತುಗೊಳಿಸಿ ಈ ರೀತಿ ಕಂಬಳವನ್ನು ನಡೆಸುವುದು ದೇಶದ ಯಾವುದೇ ಭಾಗದಲ್ಲೂ ಕಾಣಲು ಸಿಗುವುದಿಲ್ಲ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿಧಾನಸಭಾ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮೇಯರ್ ಕವಿತಾ ಸನಿಲ್, ಸಮಿತಿಯ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಿ.ಎಂ, ಗೌರವ ಸಲಹೆಗಾರರಾದ ಉಮಾನಾಥ ಕೋಟ್ಯಾನ್, ವಿಜಯಕುಮಾರ್ ಕಂಗಿನಮನೆ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.