ಕಸಿ ಮಾಡಿದ ಗರ್ಭಕೋಶದಿಂದ ಮಗುವಿನ ಜನನ
ವಾಶಿಂಗ್ಟನ್,ಡಿ.3: ಅಮೆರಿಕದ ವೈದ್ಯಕೀಯ ಇತಿಹಾಸದಲ್ಲೇ ಹೊಸ ಮೈಲುಗಲ್ಲೆಂಬಂತೆ ಗರ್ಭಕೋಶಕಸಿ ಮಾಡಲ್ಪಟ್ಟ ಮಹಿಳೆಯೊಬ್ಬರು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿದ್ದಾರೆ. ಗರ್ಭಕೋಶವಿಲ್ಲದೆ ಜನಿಸಿದ ಈ ಮಹಿಳೆಗೆ 2016ನೇ ಇಸವಿಯ ಆರಂಭದಲ್ಲಿ ಗರ್ಭಕೋಶ ಕಸಿಮಾಡಲಾಗಿತ್ತು. ಶುಕ್ರವಾರದಂದು ಈ ಮಹಿಳೆಯು ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ಬೇಲರ್ ವಿವಿ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಶಿಶುವಿಗೆ ಜನ್ಮ ನೀಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಗರ್ಭಕೋಶ ಕಸಿಗಾಗಿ ಈ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷಗಳಿಂದ 10 ಮಂದಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 16ರಂದು ನಾಲ್ವರು ಮಹಿಳೆಯರಿಗೆ ಅದು ಗರ್ಭಕೋಶ ಕಸಿ ಮಾಡಿತ್ತು. ಇವರ ಪೈಕಿ ಮೂವರ ಗರ್ಭಕೋಶಗಳಲ್ಲಿ ರಕ್ತ ಹರಿವು ಕಡಿಮೆಯಿದ್ದ ಕಾರಣ, ಅವುಗಳನ್ನು ತೆಗೆದುಹಾಕಲಾಗಿತ್ತು. ಗರ್ಭಕೋಶದ ಕಸಿ ಮಾಡಲ್ಪಟ್ಟ ಮಹಿಳೆಯೊಬ್ಬರು ಮಗುವಿಗೆ ಜನ್ಮನೀಡಿರುವುದು ಅಮೆರಿಕದಲ್ಲಿ ಇದೇ ಮೊದಲಾಗಿದೆ. ಆದರೆ, ಸ್ವೀಡನ್ ಬಹಳ ವರ್ಷಗಳ ಹಿಂದೆಯೇ ಈ ಸಾಧನೆಯನ್ನು ಮಾಡಿದೆ. ಸ್ವೀಡನ್‌ನ ವೈದ್ಯ ಮ್ಯಾಟ್ಸ್ ಬ್ರಾನ್‌ಸ್ಟಾಮ್, ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಗರ್ಭಕೋಶದ ಕಸಿಯ ಮೂಲಕ ಮಗುವಿನ ಜನನಕ್ಕೆ ಕಾರಣರಾದ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.